ನೂತನ ಮನೆಯ ಗೃಹಪ್ರವೇಶಕ್ಕೆ ಅಡುಗೆ ಕೆಲಸಕ್ಕೆ ಬಂದಿದ್ದ ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ನಗರದ ಜಾಲಪ್ಪ ಕಾಲೇಜು ರಸ್ತೆಯ ಅಶ್ವತ್ಥಪ್ಪನವರ ಮನೆ ಬಳಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗರೇ ಕಾಲುವೆ ನಿವಾಸಿ ಹೇಮಂತ (17), ಮೃತ ಬಾಲಕ.
ಶಾಮಿಯಾನ ಬಿಚ್ಚಲು ಹೋಗಿ ವಿದ್ಯುತ್ ಶಾಕ್ ಹೊಡೆದು ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಸ್ಪರ್ಶಿಸಿದ ಕೂಡಲೇ ಮೇಲಿನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನಪ್ಪಿರುವುದಾಗಿ ಪೋಷಕರು ಆರೋಪ ಮಾಡಿದ್ದಾರೆ.
ಬಾಲಕಾರ್ಮಿಕನನ್ನು ಕೆಲಸಕ್ಕೆ ಕರೆದುಕೊಂಡು ಕೆಲಸ ಮಾಡಿಸಿರುವ ಗುತ್ತಿಗೆದಾರನ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಕೇವಲ ಯು.ಡಿ.ಆರ್.ದಾಖಲಿಸಿ ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿಲ್ಲ ಎಂದು ಆರೋಪ ಮಾಡಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಮತ್ತೆ ಪೋಷಕರು ದೂರು ನೀಡಿದ್ದಾರೆ. ಶವ ಪರೀಕ್ಷೆ ವರದಿ ಬಂದ ನಂತರ ಪರಿಶೀಲಿಸುವುದಾಗಿ ಗ್ರಾಮಾಂತರ ಠಾಣೆ ಪೊಲೀಸರು ಹೇಳಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.