
ಅಡುಗೆ…….
ರುಚಿ – ತೃಪ್ತಿ – ಸಮಾನತೆ…..
ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ….
ಮನುಷ್ಯ ಬದುಕಿನ ಜೀವದ್ರವ್ಯಗಳಲ್ಲಿ ಗಾಳಿ ಮತ್ತು ನೀರಿನ ನಂತರ ಆಹಾರವೇ ಅತ್ಯಂತ ಪ್ರಮುಖವಾದದ್ದು. ಹಿಂದೆ ಅನಾಗರಿಕ ಮಾನವ ಗೆಡ್ಡೆ, ಗೆಣಸು, ಹಣ್ಣು, ಹಂಪಲು, ಪ್ರಾಣಿ, ಪಕ್ಷಿ, ಕೀಟಗಳನ್ನು ತಿಂದು ಬದುಕುತ್ತಿದ್ದ. ದಿನಗಳೆದಂತೆ ಮನುಷ್ಯನ ಅನಿವಾರ್ಯತೆಗಳು, ಅಗತ್ಯಗಳು, ಆಸೆಗಳು, ದುರಾಸೆಗಳು
ಜೊತೆಗೆ ಆತನ ನಾಲಿಗೆ ರುಚಿ
ಬಯಸತೊಡಗಿತು ಮತ್ತು ಅದಕ್ಕೆ ತಕ್ಕಂತೆ ಅವಕಾಶಗಳು ಒದಗಿ ಬಂದವು.
ನಿರ್ದಿಷ್ಟವಾಗಿ ಹಣ್ಣು, ತರಕಾರಿ, ಪ್ರಾಣಿ, ಪಕ್ಷಿಗಳನ್ನು ಅನುಭವದ ಆಧಾರದ ಮೇಲೆಯೇ ಗುರುತಿಸಿ ಆಹಾರವನ್ನಾಗಿ ಉಪಯೋಗಿಸ ತೊಡಗಿದ. ಕೊನೆಗೆ ಈ 2025 ರಲ್ಲಿ ನಿಂತು ಹಿಂತಿರುಗಿ ನೋಡಿದಾಗ ಆಹಾರಗಳ ವೈವಿಧ್ಯತೆ ಕಲ್ಪನೆಗೂ ಮೀರಿ ಬೆಳೆದಿದೆ.
ದಕ್ಷಿಣದಿಂದ ಉತ್ತರದವರೆಗೂ, ಪೂರ್ವದಿಂದ ಪಶ್ಚಿಮದವರೆಗೂ ಇಡೀ ದೇಶದ ಆಹಾರ ವಿಭಿನ್ನತೆ ಚಕಿತಗೊಳಿಸುತ್ತದೆ. ನಮ್ಮ ದೇಶದಲ್ಲಿ ಹಳ್ಳಿ, ಪಟ್ಟಣ, ನಗರ,
ಮೆಟ್ರೋಪಾಲಿಟಿನ್ ಸಿಟಿ ಸೇರಿ ಹೆಜ್ಜೆ ಹೆಜ್ಜೆಗೂ ಸಣ್ಣ ಗೂಡಂಗಡಿಯಿಂದ ಸೆವೆನ್ ಸ್ಟಾರ್ ಹೋಟೆಲ್ ಗಳವರೆಗೆ ವ್ಯಾಪಕವಾಗಿ ಹಬ್ಬಿಕೊಂಡಿದೆ. ಬಹುಶಃ ದೇಶದ ಜನಸಂಖ್ಯೆಯ ಶೇಕಡಾ 20% ಗೂ ಹೆಚ್ಚು ಜನ ಅಥವಾ ಅದಕ್ಕಿಂತ ಹೆಚ್ಚು ಆಹಾರ ಮತ್ತು ಅದಕ್ಕೆ ಸಂಬಂಧಿಸಿದ ವ್ಯಾಪಾರ, ವ್ಯವಹಾರ ಮತ್ತು ಪೂರಕ ಉದ್ಯಮಗಳಲ್ಲಿ ತೊಡಗಿಸಿಕೊಂಡು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅದರಲ್ಲೂ ಅನೇಕ ಕಡೆ ಸಂಜೆಯ ಸಮಯದಲ್ಲಿ ಸಣ್ಣ ಮತ್ತು ಮದ್ಯಮ ಪ್ರಮಾಣದ ಹೋಟೆಲ್ ಗಳ ಮುಂದೆ ಸಾಕಷ್ಟು ಜನ ಸರತಿಯ ಸಾಲಿನಲ್ಲಿ ನಿಂತಿರುತ್ತಾರೆ. ಪ್ರವಾಸಿ ಸ್ಥಳಗಳಲ್ಲಿ ಆಹಾರದ ಬೇಡಿಕೆಯನ್ನು ಪೂರೈಸುವುದೇ ಕಷ್ಟ.
ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಅಥವಾ ಮಧ್ಯಪ್ರಾಚ್ಯದ ದೇಶಗಳಲ್ಲಿ ಅಥವಾ ಆಫ್ರಿಕನ್ ದೇಶಗಳಲ್ಲಿ ನನಗನಿಸಿದಂತೆ ಇಷ್ಟೊಂದು ವೈವಿಧ್ಯತೆ ಕಾಣುವುದಿಲ್ಲ. ಚೀನಾ ಜಪಾನ್ ನಲ್ಲಿ ಸಹ ವೈವಿಧ್ಯತೆ ಇದ್ದರೂ ಬಹುಶಃ ಭಾರತವನ್ನು ಮೀರಿಸಲಾರದೇನೋ. ಏಕೆಂದರೆ ಭಾರತದ ಉದ್ದಗಲಕ್ಕೂ ಪ್ರತಿ 100/150/200 ಕಿಲೋ ಮೀಟರ್ ಗಳ ಅಂತರಕ್ಕೆ ಆಹಾರ ಪದಾರ್ಥಗಳ ಅಡುಗೆಯ ರೀತಿ ನೀತಿ ಬದಲಾಗುತ್ತಾ ಸಾಗುತ್ತದೆ. ಅದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವೇ ಇಲ್ಲ. ಅಷ್ಟೊಂದು ವೈವಿಧ್ಯತೆ ಭಾರತದ ಆಹಾರದಲ್ಲಿ ಅಡಗಿದೆ.
ಇನ್ನು ಆಹಾರದ ಮತ್ತೊಂದು ಗುಣಲಕ್ಷಣ ರುಚಿ. ಸಾಂಪ್ರದಾಯಕವಾಗಿ ಆ ರುಚಿ ಭಾರತದಲ್ಲಿ ತಾಯಿಯ ಅಥವಾ ಹೆಣ್ಣಿನ ಕೈಗುಣವನ್ನು ಅವಲಂಬಿಸಿರುತ್ತದೆ ಎನ್ನುವ ಪ್ರತೀತಿಯಿದೆ. ವಾಸ್ತವವಾಗಿ ಮತ್ತು ಸಾಂಕೇತಿಕವಾಗಿ ಪ್ರೀತಿ ಅಭಿಮಾನದಿಂದ ಅದನ್ನು ಕೈಗುಣ ಎಂದು ಕರೆದರೂ ಅದೊಂದು ಅನುಭವದ ಮೂಸೆಯಲ್ಲಿ ಅಡಗಿದ ವೈಜ್ಞಾನಿಕ ಕಲೆ. ಆಹಾರ ಯಾವುದೇ ಇರಲಿ ಅದನ್ನು ತಯಾರಿಸುವ ವ್ಯಕ್ತಿಯ ಮತ್ತು ವಸ್ತುಗಳ ಸಮಯಪ್ರಜ್ಞೆ ಮತ್ತು ಅನುಭವ ಇಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.
ಒಂದು ಆಹಾರ ತಯಾರಿಸಲು ನೀವು ಬಳಸುವ ಆಹಾರ ಪದಾರ್ಥಗಳ ಗುಣಮಟ್ಟ, ಮಣ್ಣಿನ ಸೊಗಡು ಅಥವಾ ಫಲವತ್ತತೆ, ನೀರು, ಅದನ್ನು ಬೇಯಿಸುವ ಒಲೆ ಅಂದರೆ ಸೌದೆ, ಗ್ಯಾಸ್ ಸ್ಟವ್, ವಿದ್ಯುತ್ ಸ್ಟವ್ ಮುಂತಾದ ಬಿಸಿ ಮಾಡುವ ಸಲಕರಣೆಗಳು, ಅಡುಗೆಯ ಸಂದರ್ಭದಲ್ಲಿ ವಿವಿಧ ಆಹಾರ ಪದಾರ್ಥಗಳ ಸರಿಯಾದ ಸಮಯಕ್ಕೆ ಮಿಶ್ರಣ, ಅದಕ್ಕೆ ಕೊಡಬೇಕಾದ ಬೆಂಕಿಯ ಪ್ರಮಾಣ, ಪೂರಕ ಪದಾರ್ಥಗಳು ಸೇರಿಸಬೇಕಾದ ಸಮಯ, ಬೇಯಲು ಅಥವಾ ರೂಪಗೊಳ್ಳಲು ನಿಗದಿಯಾದ ಸಮಯ, ಎಲ್ಲದರ ಒಟ್ಟು ಸಮ್ಮಿಶ್ರಣ ಹೀಗೆ ಅನೇಕ ಅಂಶಗಳು ಅಡಕವಾಗಿರುತ್ತವೆ.
ಸಾಮಾನ್ಯವಾಗಿ ಮನೆಗಳಲ್ಲಿ ಅಡುಗೆ ಮಾಡುವ ವ್ಯಕ್ತಿ ಮುಖ್ಯವಾಗಿ ಮಹಿಳೆ ಅದನ್ನು ಅತ್ಯಂತ ಸಹಜವಾಗಿಯೇ ನಿರ್ವಹಿಸುತ್ತಾರೆ. ( ಇತ್ತೀಚೆಗೆ ಅಡುಗೆ ಮಾಡುವ ಪುರುಷರ ಸಂಖ್ಯೆಯೂ ಹೆಚ್ಚಾಗಿದೆ. ಅದು ಬೇರೆ ವಿಷಯ.) ಅದರ ಆಧಾರದ ಮೇಲೆ ಅಡುಗೆಯ ರುಚಿ ನಿರ್ಧಾರವಾಗಿರುತ್ತದೆ. ಹಾಗೆಂದು ನಾವು ಸಹ ಅಷ್ಟೇ ವಸ್ತುಗಳನ್ನ ಉಪಯೋಗಿಸಿಕೊಂಡು ಅದೇ ರೀತಿಯ ಅಡುಗೆ ಮಾಡಿದರೆ ರುಚಿಯಲ್ಲಿ ಖಂಡಿತ ವ್ಯತ್ಯಾಸವಿರುತ್ತದೆ. ನೂರಕ್ಕೆ ನೂರರಷ್ಟು ತಾಯಿ ಅಥವಾ ಮನೆಯ ಹೆಣ್ಣುಮಗಳು ತಯಾರು ಮಾಡಿದ ರುಚಿ ನಮಗೆ ಸಾಧ್ಯವೇ ಇಲ್ಲ. ಏಕೆಂದರೆ ಅದೊಂದು ಗಣಿತ ವಿಜ್ಞಾನ ಮಾತ್ರವಲ್ಲ ಅದರೊಳಗಡೆ ಇರುವ ಅನುಭವದ ಕಲೆಯೂ ಮುಖ್ಯವಾಗುತ್ತದೆ.
ಅಡುಗೆಯ ರುಚಿ ತಿನ್ನುವವರ ವಯಸ್ಸಿನ ಆಧಾರದ ಮೇಲೆ ಸಹ ಬದಲಾಗುತ್ತಿರುತ್ತದೆ. ನಮ್ಮ ನಾಲಿಗೆ ವಯಸ್ಸಾದಂತೆ ರುಚಿಯನ್ನು ಗ್ರಹಿಸುವ ಸಾಮರ್ಥ್ಯವನ್ನು ನಿಧಾನವಾಗಿ ಸ್ವಲ್ಪ ಸ್ವಲ್ಪ ಮಟ್ಟಿಗೆ ಕಳೆದುಕೊಳ್ಳುತ್ತಾ ಹೋಗುತ್ತದೆ. ಆದ್ದರಿಂದಲೇ ಎಲ್ಲರಿಗೂ ಚಿಕ್ಕ ವಯಸ್ಸಿನಲ್ಲಿ ತಾಯಿ ಮಾಡಿದ ಅಡುಗೆಯ ರುಚಿ ಜೀವನ ಪೂರ್ತಿ ಕಾಡುತ್ತಲೇ ಇರುತ್ತದೆ.
ಊಟ ಮಾಡುವ ಸಮಯ, ಸಂದರ್ಭವು ಸಹ ರುಚಿಯ ಮೇಲೆ ಪರಿಣಾಮ ಬೀರುತ್ತದೆ. ಹಸಿವಾದಾಗ ಊಟ ಮಾಡಿದರೆ ಅದರ ರುಚಿಯೇ ಬೇರೆ. ಆಹಾರ ಸೇವಿಸುವಾಗ ನಮ್ಮ ಮನಸ್ಥಿತಿಯೂ ಕೂಡ ಮುಖ್ಯವಾಗಿರುತ್ತದೆ. ಮನಸ್ಸು ಸಂತೋಷದಿಂದ ಇರುವಾಗಲೂ ಆಹಾರದ ರುಚಿ ಹೆಚ್ಚಾಗುತ್ತದೆ. ಮನೆಯವರೊಂದಿಗೆ ಊಟ ಮಾಡಿದಾಗ ಅದು ನೀಡುವ ತೃಪ್ತಿಯೇ ಬೇರೆ.
ಆಹಾರದ ರುಚಿಯ ಗ್ರಹಿಕೆಯಲ್ಲೂ ಸಹ ಸಾಕಷ್ಟು ವ್ಯತ್ಯಾಸಗಳಾಗುತ್ತವೆ. ಅಂದರೆ ಆಹಾರ ತಿನ್ನುವಾಗ ರುಚಿಯಾಗಿದ್ದು ಊಟವಾದ ನಂತರ ಒಂದು ರೀತಿಯ ಅಸಮಾಧಾನ ಅಥವಾ ಅತೃಪ್ತಿ ಅಥವಾ ಹುಳಿತೇಗು ಉಂಟು ಮಾಡಿದರೆ ಆ ಆಹಾರದ ಗುಣಮಟ್ಟ ತಾತ್ಕಾಲಿಕ ರುಚಿಯನ್ನು ಮಾತ್ರ ನೀಡುತ್ತದೆ. ದೀರ್ಘಕಾಲದಲ್ಲಿ ಆ ರೀತಿಯ ಆಹಾರ ಹೆಚ್ಚು ಸೇವಿಸಲಾಗದು ಮತ್ತು ಅದು ಶಾಶ್ವತ ರುಚಿ ಹೊಂದಿರುವುದಿಲ್ಲ.
ಇನ್ನೂ ಕೆಲವು ಆಹಾರ ಪದಾರ್ಥಗಳನ್ನು ತಿನ್ನುವಾಗ ತಕ್ಷಣಕ್ಕೆ ಆ.. ಹಾ.. ಎನ್ನುವಷ್ಟು ರುಚಿ ನೀಡದಿದ್ದರೂ ತಿಂದ ನಂತರ ಆ ಆಹಾರದ ಬಗ್ಗೆ ತೃಪ್ತಿಯ ಭಾವ ಮೂಡುತ್ತದೆ. ಈ ವ್ಯತ್ಯಾಸವನ್ನು ನಾವು ಗಮನಿಸಬಹುದು. ಸಾಮಾನ್ಯವಾಗಿ ಈ ಆಧುನಿಕ ಕಾಲದಲ್ಲಿ ನಾವು ಮನೆ ಊಟವನ್ನು ಜೀವನಪೂರ್ತಿ ಬಹುತೇಕ ಒಂದೇ ಮನಸ್ಥಿತಿಯಲ್ಲಿ ಒಂದೇ ಆಸಕ್ತಿಯಿಂದ ತಿನ್ನಬಹುದು. ಆದರೆ ಹೋಟೆಲ್ ಊಟವನ್ನು ನಿರಂತರವಾಗಿ, ತಿಂಗಳಾನುಗಟ್ಟಲೆ ಸೇವಿಸುವುದು ತುಂಬಾ ಕಷ್ಟ. ಕೆಲವೊಮ್ಮೆ ವಾಕರಿಕೆ ಬರುತ್ತದೆ. ಏಕೆಂದರೆ ಅಲ್ಲೂ ಸಹಜತೆ ಮತ್ತು ಕೃತಕತೆ ಹಾಗೂ ವ್ಯಾಪಾರದ ಉದ್ದೇಶ, ಜೊತೆಗೆ ನೈಜ ಗುಣಮಟ್ಟದ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತದೆ.
ಹಸಿವಿನಿಂದ ಅಜೀರ್ಣದವರೆಗೆ ಆಹಾರ ನಮ್ಮೆಲ್ಲರ ಬದುಕಿನ ಭಾಗವಾಗಿ ಮುಂದುವರಿಯುತ್ತಲೇ ಇದೆ. ಆಹಾರ ಸೇವನೆಯ ರುಚಿ ಮತ್ತು ತೃಪ್ತಿ ಇಡೀ ಜಗತ್ತಿನಲ್ಲಿ ಏಕ ಪ್ರಕಾರವಾದುದು. ಅದಕ್ಕೆ ಜಾತಿ, ಧರ್ಮ, ಪ್ರದೇಶ, ಭಾಷೆ, ಹಣ, ಅಧಿಕಾರ, ಅಂತಸ್ತು ಏನೂ ಇರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಸಮಾನತೆ ಈ ಊಟ ನೀಡುವ ತೃಪ್ತಿ – ಅತೃಪ್ತಿಯಲ್ಲಿ ಕಾಣಬಹುದು.
ಒಬ್ಬೊಬ್ಬರಿಗೆ ಒಂದೊಂದು ಪದಾರ್ಥ ರುಚಿಯಾಗಬಹುದು. ಒಂದೊಂದು ಹಣ್ಣು ತರಕಾರಿ ರುಚಿ ಆಗಬಹುದು. ಶ್ರೀಮಂತರು ಇಷ್ಟ ಪಟ್ಟಿದ್ದನ್ನೇ ತಿನ್ನಬಹುದು. ಆದರೆ ಆಹಾರ ನೀಡುವ ತೃಪ್ತಿ ಮತ್ತು ಆಹಾರದ ರುಚಿ ಜಗತ್ತಿನ ಎಲ್ಲ ಜನರಿಗೂ ತನ್ನದೇ ವಿಶಿಷ್ಟ ಸಮಾನತೆಯನ್ನು ಉಂಟುಮಾಡುತ್ತದೆ……
ಒಟ್ಟಿನಲ್ಲಿ ನೀವು ಯಾರೇ ಆಗಿರಿ ಏನೇ ಆಗಿರಿ ಆಹಾರ ಮಾತ್ರ ನಮ್ಮ ಬದುಕಿನ ಜೀವ ದ್ರವ್ಯವಾಗಿ ಸದಾ ನಮ್ಮೊಂದಿಗೆ ಇರುತ್ತದೆ. ಆದ್ದರಿಂದ ಆಹಾರವನ್ನು ವ್ಯರ್ಥ ಮಾಡಬೇಡಿ.
” ತಿನ್ನುವ ಹಕ್ಕಿದೆ – ಬಿಸಾಡು ಹಕ್ಕು ನಮಗಿಲ್ಲ ” ಬೆಳಗಿನ ಶುಭೋದಯ ಧನ್ಯವಾದಗಳು…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ