ಬೆಂಗಳೂರಿನ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ವಿರುದ್ಧ ಹೋರಾಟ ನಡೆಸುತ್ತಿದ್ದಾಗ ಉಪವಾಸ ಸತ್ಯಾಗ್ರಹ ನಿರತ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆಯನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಖಂಡಿಸಿದ್ದು, ಸಾವನ್ನಪ್ಪಿರುವ ವಿದ್ಯಾರ್ಥಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ದೊಡ್ಡಬಳ್ಳಾಪುರ ತಾಲ್ಲೂಕು ಸಮಿತಿ ಆಗ್ರಹಿಸಿದೆ.
ಎಸ್ಎಫ್ಐ ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ನಟರಾಜು ಮಾಹಿತಿ ನೀಡಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 12 ದಿನಗಳಿಂದ ಕ್ಯಾಂಪಸ್ ಒಳಗೆ ಹೋರಾಟ ನಡೆಸುತ್ತಿದ್ದರು. ಈ ಹೋರಾಟಕ್ಕೆ ಅಜೀಂ ಪ್ರೇಮ್ ಜಿ ಯುನಿವರ್ಸಿಟಿ ಆಡಳಿತ ಮಂಡಳಿ ಸೂಕ್ತವಾಗಿ ಸ್ಪಂದಿಸದ ಕಾರಣ ವಿದ್ಯಾರ್ಥಿಗಳ ಹೋರಾಟ ಸಮಿತಿ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ಹೋರಾಟವನ್ನು ನಡೆಸಿದ್ದರು.
ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಸಮಗ್ರ ತನಿಖೆಯನ್ನು ನಡೆಸಿ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿಯ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ ಎಂದರು.