ಕೋಲಾರ: ಜಿಲ್ಲೆಯಾದ್ಯಂತ ಆಕ್ರಮ ಸಾಗುವಳಿ ಚೀಟಿ, ಹಾಗೂ ಒತ್ತುವರಿ ಆಗಿರುವ ಸರ್ಕಾರಿ ಆಸ್ತಿಗಳನ್ನು ತೆರೆವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಜಾನುವಾರುಗಳ ರಕ್ಷಣೆಗೆ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ 100 ಎಕರೆ ಗೋಮಾಳ ಜಮೀನು ಮೀಸಲಿಡಬೇಕೆಂದು ರೈತ ಸಂಘದಿಂದ ಬಂಗಾರಪೇಟೆ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನೆಡೆಸಿ ತಹಶೀಲ್ದಾರ್ ವೆಂಕಟೇಶಪ್ಪ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಜನಸಾಮಾನ್ಯರ ತೆರಿಗೆ ಹಣದಲ್ಲಿ ಲಕ್ಷ ಲಕ್ಷ ಸಂಬಳ ಪಡೆದು ಜನಸಾಮಾನ್ಯರ ಕೆಲಸವನ್ನು ಮಾಡಬೇಕಾದ ಅಧಿಕಾರಿಗಳು ಶ್ರೀಮಂತರ ಪ್ರಭಾವಿ ರಾಜಕಾರಣಿಗಳು ಹೇಳಿದ ಕೆಲಸವನ್ನು ಕ್ಷಣ ಮಾತ್ರದಲ್ಲಿ ಮಾಡಿ ಕಡತಗಳನ್ನು ಮನೆ ಬಾಗಿಲಿಗೆ ತಲುಪಿಸಿದರೆ ಬಡವರ ಕೆಲಸ ಆಗಬೇಕಾದರೆ ಮೊದಲು ಕಚೇರಿಯನ್ನು ತಮ್ಮ ಅಂಗೈಯಲ್ಲಿಟ್ಟುಕೊಂಡಿರುವ ದಲ್ಲಾಳಿಗಳ ಸಂಪರ್ಕವಿಲ್ಲದೆ, ಬಡವರ ನೆರಳು ಸಹ ಇಲಾಖೆಯ ಬಾಗಿಲಿಗೆ ಬೀಳುವಂತಿಲ್ಲ ಅಷ್ಟರ ಮಟ್ಟಿಗೆ ಜಿಲ್ಲಾಡಳಿತ ಹದಗೆಟ್ಟಿದೆ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಪಹಣಿ ಪಡೆಯಬೇಕಾದರೆ ತಿಂಗಳಾನುಘಟ್ಟಲೇ ಕಚೇರಿಗೆ ಅಲೆಯಬೇಕು, ಆದರೆ ದಾಖಲೆ ವಿಭಾಗದ ಪ್ರಮುಖ ಕಡತಗಳು ರಾತ್ರೋ ರಾತ್ರಿ ಪ್ರಭಾವಿ ರಾಜಕಾರಣಿಗಳ ಮನೆ ಭಾಗಿಲಿಗೆ ಸೇರಿ ತಿದ್ದುಪಡಿ ಆದ ನಂತರ ಹೊಸ ಕಡತವನ್ನು ಮಾಡಿ ಮತ್ತೆ ಯಥಾಸ್ಥಿತಿ ದಾಖಲೆ ವಿಭಾಗಕ್ಕೆ ಬಂದು ತಲುಪುತ್ತಿದೆ ಎಂದು ಆರೋಪ ಮಾಡಿದರು.
ಬಂಗಾರಪೇಟೆ ತಾಲೂಕಿನ ಹಿಂದಿನ ತಹಶೀಲ್ದಾರ್ ದಿ.ಸತ್ಯಪ್ರಕಾಶ್, ಹಾಗೂ ವಿಜಯಣ್ಣನವರ ಅವಧಯಲ್ಲಿ ಅಮಾಯಕ ರೈತರ ಹೆಸರಿನಲ್ಲಿ ಭೂಗಳ್ಳರಿಗೆ ರಾಜಕಾರಣಿಗಳಿಗೆ ನಕಲಿದಾಖಲೆಗಳನ್ನು ಕಂದಾಯ ಸರ್ವೇ ಅಧಿಕಾರಿಗಳು ಸೃಷ್ಠಿ ಮಾಡಿ ಸಾವಿರಾರು ಸಾಗುವಳಿ ಚೀಟಿಗಳನ್ನು ಲಕ್ಷ ಲಕ್ಷಕ್ಕೆ ಬೀದಿಗಳಲ್ಲಿ ಮಾರಾಟವಾಗಿದ್ದು, ಬಡವರ ಜಮೀನು ಶ್ರೀಮಂತರ ಪಾಲಾಗಿ ಭೂಮಿಗಾಗಿ ಭೂ ರಹಿತ ಬಡವರು ಆಕಾಶ ನೋಡುವಂತಾಗಿದೆ ಎಂದು ಅಧಿಕಾರಿಗಳ ರೈತ ವಿರೋದಿ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ, ಮುಂಗಾರು ಮಳೆ ಆರ್ಭಟಕ್ಕೆ ಹೊರ ರಾಜ್ಯಗಳ ಪರಿಸ್ಥಿತಿ ನೋಡಿದರು ಸ್ಥಳಿಯ ಕಂದಾಯ ಅಧಿಕಾರಿಗಳು ಮುಂಜಾಗ್ರತವಾಗಿ ಒತ್ತುವರಿ ಆಗಿರುವ ಕೆರೆ, ರಾಜಕಾಲುವೆಗಳನ್ನು ಸರ್ವೇ ಮಾಡಿಸಿ ಒತ್ತುವರಿ ತೆರೆವುಗೊಳಿಸಿ ಅಭಿವೃದ್ದಿ ಮಾಡದೆ ಬೇಜವಬ್ದಾರಿಯಿಂದ ವರ್ತಿಸಿದರೆ ಮುಂದೆ ಮುಂಗಾರು ಮುನಿದರೆ ರೈತರ ಬೆಳೆ, ಜನಸಾಮಾನ್ಯರ ಬದುಕು ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ ಎಂದು ಆರೋಪ ಮಾಡಿದರು.
ಈ ಅನಾಹುತಗಳು ಸಂಭವಿಸಬಾರದು ಎಂದರೆ ತಾಲ್ಲೂಕಿನಾದ್ಯಂತ ಬಲಾಡ್ಯರು ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆಗಳು, ಪೆಟ್ರೋಲ್ ಬಂಕ್‌ಗಳು, ಮದುವೆ ಮಂಟಪಗಳು, ಕಟ್ಟಿಕೊಂಡಿರುವುದನ್ನು ಮುಲಾಜಿಲ್ಲದೆ ದ್ವಂಸ ಮಾಡಿ ಸರ್ಕಾರಿ ಆಸ್ತಿಗಳನ್ನು ಉಳಿಸದೇ ಹೋದರೆ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿ ತಾಲ್ಲೂಕಿನಲ್ಲೂ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ಹಳ್ಳಿಯಲ್ಲೂ ಸಾವಿರ ಜಾನುವಾರುಗಳಿಗೆ 100 ಎಕರೆ ಗೋಮಾಳ ಜಮೀನು ಮೀಸಲೀಡಬೇಕೆಂಬ ಕಾನೂನು ಇದೆ ಆದರೆ ಇರುವ ಗೋಮಾಳವನ್ನು ರಾಜಕಾರಣಿಗಳು ಭೂ ಮಾಪಿಯದವರು ಒತ್ತುವರಿ ಮಾಡಿಕೊಂಡು ಖಾಸಗಿ ಲೇಔಟ್ ಅಭಿವೃದ್ದಿ ಮಾಡುವ ಮೂಳಕ ಗೋಮಾಳ ಜಮೀನನ್ನು ನುಂಗಿ ನೀರು ಕುಡಿಯುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ತಿಗಳನ್ನು ಉಳಿಸುವ ಇಚ್ಚಾಶಕ್ತಿ ಅಧಿಕಾರಿಗಳ ಮೇಲಿದೆ ಇದನ್ನು ಮನವರಿಕೆ ಮಾಡಿಕೊಂಡು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಆಕ್ರಮ ಸಾಗುವಳಿ ಚೀಟಿ ಸರ್ಕಾರಿ ಆಸ್ತಿಗಳ ಒತ್ತುವರಿ ತೆರೆವುಗೊಳಿಸಿ ಜಾನುವಾರುಗಳ ರಕ್ಷಣೆಗೆ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ 100 ಎಕರೆ ಗೋಮಾಳ ಮೀಸಲೀಡಬೇಕೆಂಧು ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ವೆಂಕಟೇಶಪ್ಪರವರು ಸರ್ಕಾರಿ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಸರ್ಕಾರಿ ಆಸ್ತಿಗಳನ್ನು ಉಳಿಸುವ ಜೊತೆಗೆ ಆಕ್ರಮ ಸಾಗುವಳಿ ತನಿಖೆ ಮಾಡಿ ರದ್ದುಗೊಳಿಸಿ ಒತ್ತುವರಿ ಆಗಿರುವ ಸರ್ಕಾರಿ ಗೋಮಾಳ ಗುರುತಿಸಿ ಜಾನುವಾರುಗಳ ರಕ್ಷಣೆಗೆ ಮೀಸಲೀಡುವ ಭರವಸೆ ನೀಡಿದರು.
ಹೋರಾಟದಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲ್ಲೂಕಾದ್ಯಕ್ಷ ಕದರಿನತ್ತ ಅಪ್ಪೋಜಿರಾವ್, ಹ.ಸೇ.ಜಿಲ್ಲಾದ್ಯಕ್ಷ ಕಿರಣ್, ಚಾಂದ್‌ಪಾಷ, ಬಾಬಾಜಾನ್, ಜಾವೇದ್, ಮಹಮದ್ ಶೋಹಿಬ್, ಕಾಮಸಮುದ್ರ ಮುನಿಕೃಷ್ಣ, ಮುನಿರಾಜು, ವಿಶ್ವ, ರಾಮಸಾಗರ ವೇಣು, ಸುರೇಶ್‌ಬಾಬು, ಪಾರಂಡಹಳ್ಳಿ ಮಂಜುನಾಥ್, ಪೆಮ್ಮದೊಡ್ಡಿ ಯಲ್ಲಪ್ಪ, ಹರೀಶ್, ಮಂಗಸಂದ್ರ ತಿಮ್ಮಣ್ಣ, ಗಿರೀಶ್, ಶೈಲಜ, ರಾಧಮ್ಮ, ಶೋಭ, ರತ್ನಮ್ಮ ಚೌಡಮ್ಮ ಮುಂತಾದವರಿದ್ದರು