ಈ ವರ್ಷ ಮಳೆ ಕೊರತೆಯಿಂದಾಗಿ ತಾಲೂಕಿನ ಕೆಲ ಕೆರೆಗಳ ಒಡಲಿನಲ್ಲಿ ನೀರಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಮರಳು-ಮಣ್ಣು ದಂಧೆಕೋರರು ಕೆರೆಗಳ ಒಡಲನ್ನು ಜೆಸಿಬಿ, ಹಿಟಾಚಿಗಳ ಮೂಲಕ ಬಗೆದು ಅಕ್ರಮವಾಗಿ ಮರಳು-ಮಣ್ಣು ಸಾಗಿಸಿ ಅಟ್ಟಹಾಸ ಮೆರೆಯುತ್ತಿದ್ದಾರೆ.
ತಾಲೂಕಿನ ತೂಬಗೆರೆ ಹೋಬಳಿಯ ಗೂಳ್ಯ ನಂದಿಗುಂದ ಗ್ರಾಮಕ್ಕೆ ಸೇರಿದ ಸರ್ವೇ ನಂಬರ್ 61ರ ಸರ್ಕಾರಿ ಕೆರೆಯಲ್ಲಿ ತಾಲೂಕು ಆಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖಾ ವತಿಯಿಂದ ಅಪ್ಪಣೆ ಇಲ್ಲದೆ ರಾಜಾರೋಷವಾಗಿ ಮಣ್ಣು-ಮರಳು ದಂಧೆ ನಡೆಯುತ್ತಿದೆ. ಕೆರೆಯ ಒಡಲಲ್ಲಿ ಜೆಸಿಬಿ ಮೂಲಕ 5ರಿಂದ 10ಅಡಿಗಳಷ್ಟು ಬಗೆದು ಕೆರೆಯನ್ನು ಬರಿದು ಮಾಡಲಾಗುತ್ತಿದೆ.
ಕೆರೆಯಿಂದ ಒಂದು ದಿನಕ್ಕೆ 100-150 ಲೋಡ್ ಮಣ್ಣು-ಮರಳುನ್ನು ಸಾಗಿಸಲಾಗುತ್ತದೆ. ಒಂದು ಲೋಡ್ ನ್ನು 1000-1500ಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಎಷ್ಟೇ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಲಿಲ್ಲ. ನಾವು ನಮ್ಮ ಹೊಲ ಗದ್ದೆಗಳಿಗೆ ಹೋಗಲು ರಸ್ತೆಯೇ ಇಲ್ಲದಂತಾಗಿದೆ ಎಂದು ಯುವ ರೈತ ಚೇತನ್ ಆಕ್ರೋಶ ವ್ಯಕ್ತಪಡಿಸಿದರು.
ಕೆರೆಯಲ್ಲಿ ಅಡಿಗಳುಗಟ್ಟಲೇ ಆಳ ಇಟ್ಟು ಮಣ್ಣನ್ನ ಹೊರತೆಗೆದಿದ್ದಾರೆ. ಒಂದು ವೇಳೆ ಮಳೆ ಬಂದು ಕೆರೆ ತುಂಬಿದರೆ ಈ ಗುಂಡಿಗಳು ಕಾಣಿಸೋದಿಲ್ಲ. ಊರಿನ ಯುವಕರು ಮೀನು ಹಿಡಿಯಲು, ಈಜು ಆಡಲು ಬಂದು ಈ ಗುಂಡಿಗಳಲ್ಲಿ ಬಿದ್ದು ಸಾವನ್ನಪ್ಪಿದರೆ ಯಾರು ಹೊಣೆ. ದನಕರುಗಳು ನೀರು ಕುಡಿಯಲು ಬಂದು ಕಾಲು ಜಾರಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಕೆರೆಯ ಮರಳು-ಮಣ್ಣನ್ನು ಖಾಸಗಿ ಬಡಾವಣೆಗಳನ್ನು ನಿರ್ಮಿಸಲು ಹಾಗೂ ಖಾಸಗಿ ಜಮೀನುಗಳಲ್ಲಿನ ಹಳ್ಳಕೊಳ್ಳ ಮುಚ್ಚಲು ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ. ಕೂಡಲೇ ಸ್ಥಳ ಪರಿಶೀಲನೆ ಮಾಡಿ, ಅಕ್ರಮವಾಗಿ ಮರಳು-ಮಣ್ಣು ದಂಧೆಕೋರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಈ ದಂಧೆಗೆ ಕಡಿವಾಣ ಹಾಕಬೇಕು. ಮುಂದಿನ ಪೀಳಿಗೆಗೆ ಕೆರೆಯನ್ನು ಉಳಿಸಿ, ಬೆಳಸಬೇಕು ಎಂದು ಪ್ರಜಾ ವಿಮೋಚನಾ ಸಮಿತಿ ತಹಶಿಲ್ದಾರ್ ಕಚೇರಿಗೆ ಲಿಖಿತ ರೂಪದಲ್ಲಿ ದೂರು ನೀಡಲಾಗಿದೆ.