ಇನ್ಮುಂದೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದರೆ ಸರ್ಕಾರಿ ಸವಲತ್ತುಗಳನ್ನು ಕಡಿತಗೊಳಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದೊಡ್ಡಬಳ್ಳಾಪುರ ವಲಯದ ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಎಸ್.ಎಂ ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಜೂನ್.7ರಂದು ಊರಿನ ಗ್ರಾಮದ ಯುವಕರು ನಗರದ ಅಬಕಾರಿ ನಿರೀಕ್ಷಕರ ಕಚೇರಿಗೆ ಮನವಿ ಸಲ್ಲಿಸಿದ್ದರು ಈ ಹಿನ್ನೆಲೆ ಇಂದು ಗ್ರಾಮದಲ್ಲಿ ಜಾಗೃತಿ ಸಭೆ ನಡೆಸಿ ಮಾತನಾಡಿದ ಅವರು, ಕುಡಿದು ಗ್ರಾಮದಲ್ಲಿ ಅಶಾಂತಿ, ಜನರ ನೆಮ್ಮದಿ ಹಾಳು ಮಾಡುವಂತಹ ಕೆಲಸ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಗ್ರಾಮದಲ್ಲಿ ಸುಮಾರು 150 ಕುಟುಂಬಗಳು ವಾಸವಾಗಿದ್ದು 7 ರಿಂದ 8 ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ, ಈ ಮದ್ಯ ಮಾರಾಟಗಾರರಲ್ಲಿ ಶಿಕ್ಷಕರೂ ಇರುವುದು ವಿಪರ್ಯಾಸ, ಮನೆಗಳಲ್ಲಿ ಪೆಟ್ಟಿಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಸೂಚಿಸಿದರು.
ಈ ವೇಳೆ ಅಬಕಾರಿ ಸಿಬ್ಬಂದಿ ಹನುಮಂತರಾಜು, ಗ್ರಾಮ ಪಂಚಾಯತ್ ಸದಸ್ಯ ಹನುಮಂತರಾಜು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದರು.