
ಭಟ್ಕಳ: ಬಡವರ ಹಸಿವು ನೀಗಿಸಲು ಸರಕಾರ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ಜಾಲವೊಂದನ್ನು ಭೇದಿಸುವಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಶನಿವಾರ ಮಧ್ಯಾಹ್ನ ನಡೆದ ಕಾರ್ಯಾಚರಣೆಯಲ್ಲಿ ಆಹಾರ ನಿರೀಕ್ಷಕರ ತಂಡವು ದಾಳಿ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿ, ಅಕ್ಕಿ ಸಾಗಾಟಕ್ಕೆ ಬಳಸಿದ್ದ ಓಮಿನಿ ವಾಹನ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡಿದೆ.
ಭಟ್ಕಳ ತಹಸಿಲ್ದಾರ್ ಕಚೇರಿಯ ಆಹಾರ ನಿರೀಕ್ಷಕ ಉದಯ ದ್ಯಾಮಪ್ಪ ತಳವಾರ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ, ರಂಗಿನಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ತಪಾಸಣೆ ನಡೆಸಲಾಯಿತು. ಈ ವೇಳೆ ಮಾರುತಿ ಸುಜುಕಿ ಓಮಿನಿ ಕಾರಿನಲ್ಲಿ ಯಾವುದೇ ಅಧಿಕೃತ ಬಿಲ್ ಅಥವಾ ದಾಖಲೆಗಳಿಲ್ಲದೆ ಸುಮಾರು 1,150 ಕೆ.ಜಿ (ಅಂದಾಜು ಮೌಲ್ಯ ₹39,100) ಪಡಿತರ ಅಕ್ಕಿಯನ್ನು ಸಾಗಿಸುತ್ತಿರುವುದು ಕಂಡುಬಂದಿದೆ.
ಅಕ್ಕಿ ಸಾಗಿಸುತ್ತಿದ್ದ ಮುಗ್ಧಂ ಕಾಲೋನಿ ನಿವಾಸಿ ಆಸೀಫ್ ಉಲ್ಲಾ ಅಬ್ದುಲ್ ರಹೀಮ್ ಸಾಬ (38) ನನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ. ವಿಚಾರಣೆಯ ವೇಳೆ ಈ ಅಕ್ಕಿಯನ್ನು ಶಿರಾಲಿಯ ಮೊಹಮ್ಮದ್ ಸಮೀರ ಅವರಿಗೆ ನೀಡಲು ಹನುಮಾನನಗರದ ಆಟೋ ಚಾಲಕ ರಾಮಚಂದ್ರ ಮಾಸ್ತಪ್ಪ ನಾಯ್ಕ ಕೊಂಡೊಯ್ಯಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.