ಅಕಾಲಿಕ ಮತ್ತು ಆಲಿಕಲ್ಲು ಮಳೆ: 3,196 ಹೆಕ್ಟೇರ್ ಕೃಷಿ ಬೆಳೆ, 3697.96 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ- ಶೀಘ್ರವೇ ಬೆಳೆ ಹಾನಿ ಸಮೀಕ್ಷೆ ನಡೆಸಿ, ಪರಿಹಾರ ನೀಡಲಾಗುವುದು- ಸಚಿವ ಪ್ರಿಯಾಂಕ್ ಖರ್ಗೆ

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಚಿವ ಸಂಪುಟ ಉಪಸಮಿತಿ ಸಭೆ ನಡೆಯಿತು..

ಇತ್ತೀಚಿನ ವರ್ಷಗಳಲ್ಲಿ ಪ್ರತಿ ವರ್ಷವೂ ಅತಿವೃಷ್ಟಿ, ಇಲ್ಲವೇ ಅನಾವೃಷ್ಟಿಯಂತಹ ಒಂದಿಲ್ಲೊಂದು ಪ್ರಾಕೃತಿಕ ವಿಕೋಪಗಳನ್ನು ರಾಜ್ಯ ಎದುರಿಸುತ್ತಿದೆ. ಇದಲ್ಲದೆ ಬೇಸಿಗೆಯ ತೀವ್ರತೆ, ಬಿಸಿಲಿನ ತಾಪಮಾನ ಪ್ರತಿ ವರ್ಷವೂ ಏರುಗತಿಯಲ್ಲಿದೆ. ಪ್ರಾಕೃತಿಕ ಸವಾಲುಗಳನ್ನು ಎದುರಿಸುವುದನ್ನು ಸರ್ಕಾರವು ಆದ್ಯತೆಯಾಗಿ ಪರಿಗಣಿಸಬೇಕಿರುವುದು ಅನಿವಾರ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಪೂರ್ವ ಮುಂಗಾರಿನಲ್ಲಿ 17 ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ, 5 ಜಿಲ್ಲೆಗಳಲ್ಲಿ ಅಧಿಕ ಮಳೆ, 6 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದ್ದರೆ, 3 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಪ್ರಸ್ತುತ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯಲ್ಲಿನ 1,655 ಸಣ್ಣ ನೀರಾವರಿ ಕೆರೆ ಕಟ್ಟೆಗಳಲ್ಲಿ ಸರಾಸರಿ 44% ನಷ್ಟು ನೀರು ಲಭ್ಯವಿದೆ. ಈ ಸಾಲಿನ ಬೇಸಿಗೆಯಲ್ಲಿ 207 ತಾಲೂಕುಗಳ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ಪೈಕಿ 60 ತಾಲೂಕುಗಳು ಈಗಾಗಲೇ ನೀರಿನ ಕೊರತೆ ಎದುರಿಸುತ್ತಿವೆ‌ ಎಂದರು.

ಬೇಸಿಗೆಯಲ್ಲಿ 2,258 ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. 212 ಗ್ರಾಮ ಪಂಚಾಯತಿಗಳು ಈಗಾಗಲೇ ಅಭಾವ ಎದುರಿಸುತ್ತಿವೆ. 4 ಗ್ರಾಮಗಳಲ್ಲಿ ಸರ್ಕಾರದ ಟ್ಯಾಂಕರ್‌ಗಳಲ್ಲಿ ನೀರು ಒದಗಿಸುತ್ತಿದ್ದು, 56 ಗ್ರಾಮಗಳಲ್ಲಿ ಖಾಸಗಿ ಟ್ಯಾಂಕರ್‌ಗಳನ್ನು ಬಳಕೆ ಮಾಡಲಾಗುತ್ತಿದೆ ಹಾಗೂ 246 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗಳ ಮುಖಾಂತರ ನೀರಿನ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನೀರಿನ ಕೊರತೆಯನ್ನು ಎದುರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಬೇಸಿಗೆಯನ್ನು ಎದುರಿಸಲು ನಿರ್ಧರಿಸಲಾಗಿರುವ ಮುನ್ನೆಚ್ಚರಿಕಾ ಕ್ರಮಗಳು

◆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಾಪ್ತಾಹಿಕ ಮಳೆಯ ಮೇಲ್ವಿಚಾರಣೆ.

◆ ಜಿಲ್ಲಾವಾರು ಬೆಳೆ ಆಕಸ್ಮಿಕ ಯೋಜನೆಗಳನ್ನು ಮತ್ತು ಬರ ನಿರೋಧಕ ಬಿತ್ತನೆ ಬೀಜದ ತಳಿಗಳನ್ನು ಅಭಿವೃದ್ಧಿಪಡಿಸುವುದು.

◆ ಜಲಾಶಯದ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಆದ್ಯತೆಯ ಮೇರೆಗೆ ಕಾಯ್ದಿರಿಸುವುದು.

◆ ನರೇಗಾ ಯೋಜನೆಯಡಿ ಜಲ ಸಂರಕ್ಷಣಾ ಕಾಮಗಾರಿಗಳಿಗೆ ಆದ್ಯತೆ ನೀಡುವುದು.

◆ ಮೇವು ಲಭ್ಯತೆ ಬಗ್ಗೆ ನಿರಂತರ ಮೇಲ್ವಿಚಾರಣೆ ನಡೆಸುವುದು ಮತ್ತು ಮೇವಿನ ಕೊರತೆ ನೀಗಿಸಲು ಯೋಜನೆಗಳನ್ನು ಸಿದ್ಧಪಡಿಸುವುದು.

2026ರ ಮಾರ್ಚ್ 15ರಿಂದ 23ನೇ ತಾರೀಖಿನವರೆಗೆ ಸಿಡಿಲು ಮತ್ತು ಗೋಡೆ ಕುಸಿತದಿಂದ ರಾಜ್ಯದಲ್ಲಿ 6 ಜನರು ಬಲಿಯಾಗಿದ್ದು, ₹30 ಲಕ್ಷ ಪರಿಹಾರ ಪಾವತಿಸಲಾಗಿದೆ. 16 ದೊಡ್ಡ ಜಾನುವಾರುಗಳು ಮತ್ತು 116 ಸಣ್ಣ ಜಾನುವಾರುಗಳು ಬಲಿಯಾಗಿದ್ದು, ಅವುಗಳ ಮಾಲೀಕರಿಗೆ ₹10 ಲಕ್ಷ ಪರಿಹಾರ ಒದಗಿಸಲಾಗಿದೆ ಎಂದರು.

ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಪ್ರಾಥಮಿಕ ವರದಿ ಪ್ರಕಾರ 3,196 ಹೆಕ್ಟೇರ್ ಕೃಷಿ ಬೆಳೆ, 3697.96 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿರುವುದು ಕಂಡುಬಂದಿದೆ. ಶೀಘ್ರವೇ ಬೆಳೆ ಹಾನಿ ಸಮೀಕ್ಷೆ ನಡೆಸಿ, ಪರಿಹಾರ ಒದಗಿಸಲು ನಿರ್ದೇಶಿಸಲಾಗಿದೆ ಎಂದು ತಿಳಿಸಿದರು..

Leave a Reply

Your email address will not be published. Required fields are marked *

error: Content is protected !!