
ಕೋಲಾರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತಂತೆ ಸಂಸತ್ತಿನಲ್ಲಿ ಅಪಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ ಒತ್ತಾಯಿಸಿದ್ದಾರೆ
ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ ಅವರು, ದೇಶದಲ್ಲಿ ಸಂಘ ಪರಿವಾರವು ಮೊದಲಿನಿಂದಲೂ ಅಂಬೇಡ್ಕರ್ ವಿರೋಧಿ ಧೋರಣೆ ಅನುಸರಿಸಿಕೊಂಡು ಬಂದಿದ್ದಾರೆ. ಮತ್ತೊಮ್ಮೆ ಬಿಜೆಪಿ ನಿಜ ಬಣ್ಣದ ಜೊತೆಗೆ ಮನುವಾದಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಅವರು ಯಾವತ್ತೂ ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳುವುದಿಲ್ಲ. ಇಂತಹ ಮನುವಾದಿ ಮನಸ್ಥಿತಿಯ ಅಮಿತ್ ಶಾ ಭಾರತದ ಗೃಹ ಸಚಿವರಾಗಿ ಮುಂದುವರಿದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಅವರ ಆಶಯಗಳಿಗೆ ವಿರುದ್ಧವಾಗುತ್ತದೆ. ಹಾಗೂ ಭಾರತದ ಸಂವಿಧಾನದ ಮೂಲ ತತ್ವಗಳಿಗೆ ದಕ್ಕೆಯಾಗುತ್ತದೆ. ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿದರು.
ಭಾರತದ ಸಂವಿಧಾನ ರಚನೆಯ ಸಂದರ್ಭದಲ್ಲಿ ನಡೆದ ಚರ್ಚೆಯಲ್ಲಿ ಕೂಡ ಅಪಮಾನಗಳು ಸಂಘ ಪರಿವಾರದಿಂದ ನಡೆದಿತ್ತು. ಅವರ ಮಾತುಗಳು ಆಕಸ್ಮಿಕವೇನೂ ಅಲ್ಲ. ಸಂವಿಧಾನ ಶಿಲ್ಪಿಗೆ ಅವಮಾನ ಮಾಡುವುದು ಅವರ ನೈಜ ಉದ್ದೇಶವಾಗಿದೆ. ಅಮಿತ್ ಶಾ ಪ್ರತಿನಿಧಿಸುವ ಆರ್‌ಎಸ್‌ಎಸ್, ಜನಸಂಘ ಮತ್ತು ಬಿಜೆಪಿ ಭಾರತ ದೇಶವನ್ನು ಸಾರ್ವಭೌಮ ಸಮಾಜವಾದಿ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ನಿರೂಪಿಸುವ ಭಾರತದ ಸಂವಿಧಾನ ಮತ್ತು ಅದರ ರಚನೆಗೆ ಅತ್ಯಂತ ಮಹತ್ವದ ಕೊಡುಗೆ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿರುದ್ಧವಾಗಿದೆ. ಅವರ ಅಂಬೇಡ್ಕರ್ ಬಗ್ಗೆ ಅತೃಪ್ತಿಯನ್ನು ಹೊರಹಾಕಿರುವುದು ಇಡೀ ದೇಶಕ್ಕೇ ಗೊತ್ತಿರುವ ಇತಿಹಾಸವಾಗಿದೆ. ಸುಳ್ಳುಗಳನ್ನು ಪ್ರಚಾರ ಮಾಡುವುದರ ಜೊತೆಗೆ ಅಂಬೇಡ್ಕರ್ ಅವರು ರಚಿಸಿರುವ ಭಾರತದ ಸಂವಿಧಾನವನ್ನು ತಾನು ಒಪ್ಪುವುದೂ ಇಲ್ಲ ಎನ್ನುವುದನ್ನು ಆರ್‌ಎಸ್‌ಎಸ್ ಬಹಿರಂಗವಾಗಿಯೇ ಹೇಳಿಕೊಂಡಿದೆ. ಇಂತಹವರಿಗೆ ಚುನಾವಣೆಯ ಸಂದರ್ಭದಲ್ಲಿ ತಕ್ಕ ಪಾಠವನ್ನು ಕಲಿಸಬೇಕಾಗಿದೆ ಎಂದರು.