ಡಾ.ಬಿ.ಆರ್.ಅಂಬೇಡ್ಕರ್ ಅವರ ನೆನಪಿಗಾಗಿ ತೂಬಗೆರೆ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಲು ಸರ್ಕಾರದಿಂದ ಅನುಮೋದನೆಗೊಂಡಿದ್ದು, ಸದ್ಯ ನಿರ್ಮಾಣ ಹಂತದಲ್ಲಿ ಭವನ ಇದೆ.
ನಿರ್ಮಿತಿ ಕೇಂದ್ರ ಗುತ್ತೆಗೆ ಪಡೆದು ಭವನ ನಿರ್ಮಾಣ ಮಾಡಲಾಗುತ್ತಿದೆ. ಅಂತಿಮ ಹಂತದ ಕಾಮಗಾರಿ ಪೂರ್ಣಗೊಳಿಸದೇ, ಗ್ರಾಮಸ್ಥರ ಗಮನಕ್ಕೆ ತರದೇ ಏಕಾಏಕಿ ಭವನ ಉದ್ಘಾಟನೆ ಮಾಡಲಾಗಿದೆ.
ಕಟ್ಟಡದ ಕಾಮಗಾರಿ ಶೇ.75ರಷ್ಟು ಮಾತ್ರ ಪೂರ್ಣಗೊಂಡಿದ್ದು, ಇನ್ನೂ ಕಾಂಪೌಂಡ್ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಸುಣ್ಣ ಬಣ್ಣ ಬಳಿಯುವುದು, ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು, ಸೂಕ್ತ ರಸ್ತೆ ಕಾಮಗಾರಿ ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳು ಬಾಕಿ ಇರುವಾಗಲೇ ಕಟ್ಟಡ ಉದ್ಘಾಟನೆ ಮಾಡಿರುವುದು ಊರಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನ ಕಟ್ಟಡಕ್ಕೆ ಅದರದೇ ಆದ ಮಹತ್ವ, ಘನತೆ- ಗೌರವ ಇರುತ್ತದೆ. ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ, ಅಂತಿಮ ಹಂತದ ಕಾಮಗಾರಿ ಪೂರ್ಣಗೊಳಿಸದೇ ಲೋಕಾರ್ಪಣೆ ಮಾಡಲಾಗಿದೆ ಎಂದು ಊರಿನ ಮುಖಂಡ ಉದಯ್ ಆರಾಧ್ಯ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಕಾಮಗಾರಿ ಪರಿಶೀಲಿಸಿ ಅಂತಿಮ ಹಂತದ ಕಾಮಗಾರಿ ಪೂರ್ಣಗೊಳಿಸಿ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಘನತೆ, ಗೌರವ ತಂದುಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.