ನಗರದ ಹೊರವಲಯದಲ್ಲಿರುವ ನಾಗದೇನಹಳ್ಳಿಯ ಗೀತಂ ಕಾಲೇಜ್ ಸಮೀಪದಲ್ಲಿ ಗಾಂಜಾ ಸೋಪ್ಪು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಅಂತಾರಾಜ್ಯ ಗಾಂಜಾ ಪೆಡ್ಲರ್ ನನ್ನು ಇನ್ಸ್‌ಪೆಕ್ಟರ್ ಮುನಿಕೃಷ್ಣ ನೇತೃತ್ವದ ಗ್ರಾಮಾಂತರ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತನನ್ನು ಹಿಂದೂಪುರ ತಾಲೂಕಿನ ಮಾನೆಪಲ್ಲಿ ಗ್ರಾಮದ ಶಿವಪ್ಪ (25) ಎನ್ನಲಾಗಿದ್ದು, ಈತನಿಂದ 7 ಲಕ್ಷ ರೂ. ಮೌಲ್ಯದ 9 ಕೆ.ಜಿ 580 ಗ್ರಾಂ ತೂಕದ ಗಾಂಜಾ ಸೋಪ್ಪು, ದ್ವಿಚಕ್ರವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯನ್ನು ಸಂಗ್ರಹಿಸಿ, ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ಅಧೀಕ್ಷಕ ಪುರುಷೋತ್ತಮ್, ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್‍ಪಿ ನಾಗರಾಜು ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಮುನಿಕೃಷ್ಣ, ಸಬ್ ಇನ್ಸ್‌ಪೆಕ್ಟರ್ ಪಂಕಜಾ, ಸಿಬ್ಬಂದಿಗಳಾದ ದತ್ತಾತ್ರೇಯ, ಅರ್ಜುನ್ ಲಮಾಣಿ, ವೆಂಕಟೇಶ್ ಕುಮಾರ್, ಗಂಗಯ್ಯ, ಹನುಮಂತರಾಜು, ಸಚಿನ ಉಪ್ಪಾರ ಕಾರ್ಯಾಚರಣೆ ನಡೆಸಿ, ಮಾದಕ ವಸ್ತು ಗಾಂಜಾವನ್ನು ಜನರಿಗೆ ಮಾರಾಟ ಮಾಡಿ ಸಮಾಜದಲ್ಲಿ ದುಷ್ಪರಿಣಾಮ ಉಂಟುಮಾಡುವ ಆಸಾಮಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.