ಹುಬ್ಬಳ್ಳಿ: ಅಂಜಲಿ ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಸುಮಾರು 494 ಪುಟಗಳ ದೋಷಾರೋಪ ಪಟ್ಟಿಯನ್ನು ಪ್ರಕರಣದ ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ಎಂ.ಎಚ್.ಉಮೇಶ ಅವರು ಇಲ್ಲಿನ 3ನೇ ದಿವಾಣಿ ನ್ಯಾಯಾಲಯ ಮತ್ತು ಜೆಎಂಎಫ್ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾರೆ.
ಗಿರೀಶ ಊರ್ಫ್ ವಿಶ್ವನಾಥ ಎಸ್. ಸಾವಂತ ಎಂಬಾತ ಅಂಜಲಿ ಅಂಬಿಗೇರ ಅವರನ್ನು ಹತ್ಯೆಗೈದಿದ್ದ. ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ಒಪ್ಪಿಸಿತ್ತು. ಸಿಐಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 85 ಸಾಕ್ಷ್ಯಗಳನ್ನು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗುತ್ತಿದೆ.
ಸಿಸಿಟಿವಿ ದೃಶ್ಯಾವಳಿ, ಮರಣೋತ್ತರ ಪರೀಕ್ಷೆ ವರದಿ, ಎಫ್‌ಎಸ್ಎಲ್ ವರದಿ, ಮೊಬೈಲ್, ಹತ್ಯೆಗೆ ಬಳಕೆ ಮಾಡಿದ ಚಾಕು ಇತ್ಯಾದಿಗಳು ಸಾಕ್ಷ್ಯದಲ್ಲಿ ಅಡಕವಾಗಿದ್ದು, ಕೊಲೆಯಾದ 98 ದಿನಗಳಲ್ಲಿ ಸಿಐಡಿ ತನಿಖೆ ನಡೆಸಿ ದೋಷಾರೋಪಣ ವರದಿ ಸಲ್ಲಿಕೆ ಮಾಡಿದೆ.
ಅಂಜಲಿ ಮೂರಾಲ್ಕು ಬಾರಿ ಮೈಸೂರಿಗೆ ಹೋಗಿ ಗಿರೀಶನನ್ನು ಭೇಟಿಯಾಗಿದ್ದು, 2024ರ ಏಪ್ರಿಲ್‌ನಲ್ಲಿ ಇಬ್ಬರ ನಡುವೆ ಮನಸ್ತಾಪ, ಗಿರೀಶ ಮೊಬೈಲ್ ನಂಬರನ್ನು ಅಂಜಲಿ ಬ್ಲಾಕ್ ಮಾಡಿದ್ದರಿಂದ ಹತಾಶೆಗೊಂಡು ಮೇ 16ರಂದು ಅಂಜಲಿಯನ್ನು ಹತ್ಯೆಗೈದಿದ್ದನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.
*ರೈಲ್ವೆ ಪೊಲೀಸರಿಗೆ ಸೆರೆ ಸಿಕ್ಕಿದ್ದ ಹಂತಕ*
ಅಂಜಲಿ ಕೊಲೆ ಮಾಡಿ ಸ್ಥಳೀಯ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಹಂತಕ ಗಿರೀಶ ಸಾವಂತ, ಮೇ 17ರಂದು ಮೈಸೂರಿನಿಂದ ಬೆಳಗಾವಿಗೆ ವಿಶ್ವಮಾನವ ರೈಲಿನಲ್ಲಿ ಪ್ರಯಾಣಿಸುವಾಗ ಮುಂಡರಗಿಯ ಮಹಿಳಾ ಪ್ರಯಾಣಿಕರೊಬ್ಬರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾನೆ. ಆಗ ಇನ್ನುಳಿದ ಪ್ರಯಾಣಿಕರಿಂದ ತಪ್ಪಿಸಿಕೊಳ್ಳಲು ಹೋದಾಗ ದಾವಣಗೆರೆ ಬಳಿ ರೈಲಿನಿಂದ ಬಿದ್ದು ಗಾಯಗೊಂಡಿದ್ದ. ದಾವಣಗೆರೆ ರೈಲ್ವೆ ಪೊಲೀಸರು ಆತನನ್ನು ವಶಕ್ಕೆ ಪಡೆದು ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದರು.
*ಮೈಸೂರಿನಿಂದಲೇ ಚಾಕು-ಕ್ಯಾಪ್ ತಂದಿದ್ದ*
ಅಂಜಲಿಯಿಂದ ಬೇಸರಗೊಂಡು ಹತಾಶನಾಗಿದ್ದ ಗಿರೀಶ ಅವಳನ್ನು ಮುಗಿಸಬೇಕೆಂಬ ಉದ್ದೇಶದಿಂದ ತಾನು ಕೆಲಸ ಮಾಡುತ್ತಿದ್ದ ಮೈಸೂರಿನ ಹೋಟೆಲ್‌ನಿಂದ ಚಾಕು ತೆಗೆದುಕೊಂಡಿದ್ದಾನೆ. ಜೊತೆಗೆ ತನ್ನ ಸುಳಿವು ಸಿಗಬಾರದೆಂದು ಬಸ್ ನಿಲ್ದಾಣ ಬಳಿಯ ಫುಟ್‌ಪಾತ್ ಅಂಗಡಿಯಲ್ಲಿ ಮಾಸ್ಕ್ ಖರೀದಿಸಿದ್ದಾನೆ ಎನ್ನಲಾಗಿದೆ.
*ಡಿಸಿಪಿ, ಎಸಿಪಿ, ಇನ್ಸ್‌ಪೆಕ್ಟರ್ ಸೇರಿ ನಾಲ್ವರು ಅಮಾನತು*
ಅಂಜಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಿರ್ಲಕ್ಷ್ಯ ತೋರಿದ ಆಪಾದನೆಯಡಿ ರಾಜ್ಯ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ, ಹುಬ್ಬಳ್ಳಿ ದಕ್ಷಿಣ ಉಪ ವಿಭಾಗದ ಎಸಿಪಿ ಅವರನ್ನು ಅಮಾನತು ಮಾಡಿತ್ತು. ಅಂದಿನ ಪೊಲೀಸ್ ಆಯುಕ್ತರಾಗಿದ್ದ ರೇಣುಕಾ ಸುಕುಮಾರ್ ಬೆಂಡಿಗೇರಿ ಠಾಣೆಯ ಇನ್ಸ್‌ಪೆಕ್ಟರ್, ಮಹಿಳಾ ಮುಖ್ಯಪೇದೆ ಅವರನ್ನು ಅಮಾನತುಗೊಳಿಸಿದ್ದರು.