
ಇದು ಭಾರತ,
ಇದೇ ಭಾರತ……
ಯಾವುದನ್ನೂ ಪ್ರಶ್ನೆ ಮಾಡಲೇ ಬಾರದು……..
ನೀನು ಹಿಂದು ಹೀಗೆಯೇ ಇರಬೇಕು….
ನೀನು ಮುಸ್ಲಿಂ ಹೀಗೆಯೇ ಇರಬೇಕು….
ನೀನು ಕ್ರಿಶ್ಚಿಯನ್ ಹೀಗೆಯೇ ಇರಬೇಕು……
ನಮ್ಮ ವೇದಗಳು, ಖುರಾನ್, ಬೈಬಲ್ ಹೀಗೆಯೇ ಹೇಳಿದೆ…..
ಅದಕ್ಕೆ ಅಪಚಾರ ಮಾಡಿದರೆ ನೀನು ಧರ್ಮ ವಿರೋಧಿ….
ಎಂತೆಂತ ಮಹಾಮಹಿಮರು ಎಷ್ಟೆಷ್ಟು ಅನುಭವದಲ್ಲಿ ಏನೇನು ಹೇಳಿರುವರೋ ಅದೇ ಸತ್ಯ……
ನೀನು ಪ್ರಶ್ನಿಸಲು ಯೋಚಿಸಲು ಏನೂ ಉಳಿದಿಲ್ಲ……
ಮೊಹರಮ್ ಹಿಂದಿನ ಕಥೆ ಗೊತ್ತೆ……
ಕ್ರಿಸ್ಮಸ್ ಹಿಂದಿನ ಸತ್ಯ ಗೊತ್ತೆ……..
ಗಣೇಶನ ಸೃಷ್ಟಿಯ ಸಾಂಕೇತಿಕತೆ ಗೊತ್ತೆ…..
ನೀನು ಗಂಡು…..
ನೀನು ಹೆಣ್ಣು……
ನೀನು ಮಗ….
ನೀನು ಸೊಸೆ…..
ನೀನು ಅಳಿಯ….
ನೀನು ಗುಜರಾತಿ…
ನೀನು ತಮಿಳಿಗ…
ನೀನು ಆಫ್ರಿಕಾದವ..
ನೀನು ದಲಿತ…..
ನೀನು ಬ್ರಾಹ್ಮಣ
ನೀನು ಜೀಸಸ್ ಗಿಂತ ದೊಡ್ಡವನೇ…….
ನೀನು ಪೈಗಂಬರ್ ಗಿಂತ ತಿಳಿದವನೇ…..
ನೀನು ಕೃಷ್ಣನಿಗಿಂತ ಬುದ್ದಿವಂತನೇ…….
ನಿನ್ನದು ಏನೂ ಇಲ್ಲ. ಎಲ್ಲವೂ ಪೂರ್ವ ನಿರ್ಧಾರಿತ.
ಕುಂಕುಮದ ಮಹತ್ವ ಗೊತ್ತೆ……
ಟೋಪಿಯ ಪ್ರಾಮುಖ್ಯತೆ ಗೊತ್ತೆ…..
ಮೇಣದ ಬತ್ತಿಯ ಪಾವಿತ್ರ್ಯತೆ ಗೊತ್ತೆ……
ಗೊತ್ತಿಲ್ಲದಿದ್ದರೆ ತಿಳಿದಿಕೋ…..
ಓದು ಓದು ಓದು ಗ್ರಂಥಗಳನ್ನು….
ಕೇಳು ಕೇಳು ಕೇಳು
ಪ್ರವಚನಗಳನ್ನು…..
ಮಾಡು ಮಾಡು ಮಾಡು ಆಚರಣೆಗಳನ್ನು……
ನಿನಗೆ ಮೋಕ್ಷ ಸದ್ಗತಿ ಸ್ವರ್ಗ ಎಲ್ಲವೂ ಸಿಗುತ್ತದೆ……..
ಇಲ್ಲದಿದ್ದರೆ ನಿನಗೆ ಅತ್ಯಂತ ಕ್ರೂರ ಶಿಕ್ಷೆಯ ನರಕವೇ ಗತಿ……….

**********************
ಇದು ನಿಜವೇ ??????
ಹಾಗಾದರೆ ಈಗ ಒಂದು ಜೀವಿಯಾಗಿ ಮೆದುಳಿನ ಸಮೇತ ಹುಟ್ಟಿರುವ ನಾವು ಈ ಜೀವನದಲ್ಲಿ ಯೋಚಿಸದೆ ಗುಲಾಮರಂತೆ ಜೀವಿಸುವುದು ಮಾತ್ರ ನಮ್ಮ ಕೆಲಸವೇ ??????
ನಮಗೆ ಸರಿ ಎನ್ನಿಸದ,
ನಮಗೆ ಅನಾನುಕೂಲವಾಗುವ,
ನಮ್ಮ ಮನಸ್ಸಿಗೆ ಹೊಳೆಯುವ,
ವಿಚಾರಗಳನ್ನು ಕಾನೂನಿನ ವ್ಯಾಪ್ತಿ ಮೀರದಂತೆ ಹೇಳಬಾರದೆ ???????
ಸಮಾಜ ಬೆಳೆದಿದೆ ನಿಜ,
ಆದುನಿಕತೆ ಅಭಿವೃದ್ಧಿಯಾಗಿದೆ ನಿಜ,
ಕಾನೂನು ಕಟ್ಟಲೆ ಇದೆ ನಿಜ,
ನೈತಿಕತೆಯೂ ಅನುಭವದಿಂದ ಬೆಳೆದು ಬಂದಿದೆ ನಿಜ………
ಇದಕ್ಕೆ ಧಕ್ಕೆಯಾಗದೆ,
ನಮ್ಮ ಗ್ರಹಿಕೆಯ ಮುಖಾಂತರ ಇನ್ನೊಂದಿಷ್ಟು ಹೊಸ ವಿಚಾರಗಳನ್ನು ಹಂಚಿಕೊಂಡರೆ ತಪ್ಪೇನು ?????
ಅಲೋಚನಾ ಶಕ್ತಿಯನ್ನು ಇನ್ನೊಬ್ಬರಿಗೆ ಅಡವಿಡಲು ಒತ್ತಾಯಿಸುವುದೇಕೆ ?????
ಹಾಗೆಂದು ಹಳೆಯದು ಕೆಟ್ಟದ್ದು ಹೊಸದು ಒಳ್ಳೆಯದು ಎಂದಲ್ಲ,
ಅಥವಾ
ಹೊಸದು ಕೆಟ್ಟದ್ದು ಹಳೆಯದು ಒಳ್ಳೆಯದು ಎಂಬುದೂ ಅಲ್ಲ…..
ಇನ್ನೂ ಇನ್ನೂ ಹೊಸ ಹೊಸ ಆಲೋಚನೆಗಳಿಗೆ ನಮ್ಮನ್ನು ತೆರೆದುಕೊಳ್ಳೋಣ….
ತಂತ್ರಜ್ಞಾನ ವಿಷಯದಲ್ಲಿ ಹೊಸ ಆವಿಷ್ಕಾರಗಳನ್ನು ಸ್ವಾಗತಿಸಿ ಬಹುಬೇಗ ಸ್ವೀಕರಿಸುವ ನಾವು,
ಮಾನವೀಯ ಮೌಲ್ಯಗಳ,
ವಿಚಾರ ತತ್ವ ಸಿದ್ದಾಂತಗಳ,
ಹಳೆಯ ಮರಕ್ಕೇ ಇನ್ನೂ ನೇತಾಡುತ್ತಿರುವುದು ಏಕೆ ?????
ಇನ್ನೊಬ್ಬ ಆಧುನಿಕ ಕೃಷ್ಣನೋ, ಜೀಸಸ್ಸೋ, ಪೈಗಂಬರೋ ಸೃಷ್ಟಿಯಾಗಲೇ ಇಲ್ಲ……
ನಾಗರಿಕ ಸಮಾಜದ ವೇಗಕ್ಕೆ,
ಭಾರತದ ಬುದ್ದ, ಮಹಾವೀರ, ಶಂಕರ ಬಸವ, ವಿವೇಕಾನಂದ, ಗಾಂಧಿ, ಅಂಬೇಡ್ಕರ್ ಮುಂತಾದವರುಗಳು ದೇವರುಗಳಾಗಿ,
ಮೂರ್ತಿಗಳಾಗಿ,
ಸಂಕೇತಗಳಾಗಿ,
ಧರ್ಮಗಳಾಗಿ,
ಸಂಘಟನೆಗಳಾಗಿ,
ಚಳವಳಿಗಳಾಗಿ,
ರಾಜಕಾರಣಿಗಳಾಗಿ,
ಮತಗಳಾಗಿ,
ಕಲಹಗಳಾಗಿ,
ಬದುಕಿನ ಸಾಧನವಾಗಿ,
ಹೊಟ್ಟೆ ಪಾಡಾಗಿ,
ರೂಪಾಂತರ ಹೊಂದಿದ್ದಾರೆ.
ಭಾರತದ ಮಟ್ಟಿಗೆ ಈಗ ಹೊಸ ಆವಿಷ್ಕಾರದ ಸಮಯ….
ಹೊಸದೆಂದರೆ ಎಲ್ಲವೂ ಹೊಸದಾದ ಪುನರ್ ಸೃಷ್ಟಿಯಲ್ಲ……
ಜನರ ಜೀವನಮಟ್ಟ ಸುಧಾರಣೆಯ ಮೂಲ ಆಶಯದೊಂದಿಗೆ…..
ಒಂದಷ್ಟು ಸಭ್ಯತೆ,
ಒಂದಷ್ಟು ಪ್ರೀತಿ,
ಒಂದಷ್ಟು ಸ್ನೇಹ,
ಒಂದಷ್ಟು ಕರುಣೆ,
ಒಂದಷ್ಟು ಸಮಾನತೆ,
ಒಂದಷ್ಟು ಮಾನವೀಯತೆ,
ಒಂದಷ್ಟು ನೆಮ್ಮದಿಗಾಗಿ…….
ಒಂದು ಅಭಿಪ್ರಾಯಕ್ಕೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದಾಗ ಅದಕ್ಕೆ ಧರ್ಮದ ಸ್ವಯಂ ವಕ್ತಾರರು ಎಷ್ಟು ಕೆಟ್ಟದ್ದಾಗಿ ಪ್ರತಿಕ್ರಿಯಿಸುವರು ಗೊತ್ತೆ.
ಇಲ್ಲದ ರಾಮ ಕೃಷ್ಣ ಅಲ್ಲಾ ಅವರಿಗೆ ಸತ್ಯ. ಅವರ ಜೀವಂತ ಜೊತೆಗಾರ ಮಿಥ್ಯ. ರಾಮನಿಗೆ ನೋವಾಗಬಾರದು. ಒಂದು ಗುಂಪಿನ ಅವರ ಗೆಳೆಯನನ್ನು ಬಾಯಿಗೆ ಬಂದಂತೆ ಬಯ್ಯಬಹುದು.
ಇದು ಸರಿಯೇ ??????
ಹಾಲು ಕುಡಿಯದ ಹಾವಿನ ಹುತ್ತಕ್ಕೆ ಹಾಲು ಸುರಿಯುವರು,…..
ಬಡ ಮಗುವಿನ ಹಸಿವಿಗೆ ನಿರ್ಲಕ್ಷ್ಯ ತೋರುವರು….
ಇದನ್ನು ಪ್ರಶ್ನಿಸಬಾರದೆ ??????
ಹಣದ ಆಮಿಷ ಒಡ್ಡಿ ಜನರನ್ನು ಮತಾಂತರ ಮಾಡುವರು…..
ಇದನ್ನು ಕೇಳಬಾರದೆ ??????
ದೇಶಕ್ಕಿಂತ ಧರ್ಮವೇ ಮುಖ್ಯವೆನ್ನುವರು……..
ಇದನ್ನು ಖಂಡಿಸಬಾರೆದೆ ???????
ಗೆಳೆಯ/ ಗೆಳತಿಯರೇ,
ಇದನ್ನು ಸಹ ಒಪ್ಪುವ ತಿರಸ್ಕರಿಸುವ ನಿರ್ಲಕ್ಷಿಸುವ ಟೀಕಿಸುವ ಸ್ವಾತಂತ್ರ್ಯ ನಿಮಗಿದೆ. ಅದಕ್ಕೆ ಮುನ್ನ ಒಮ್ಮೆ ತಾಳ್ಮೆಯಿಂದ ಯೋಚಿಸಿ ಎಂಬುದಷ್ಟೇ ನನ್ನ ಮನವಿ…….
ಧೈರ್ಯದಿಂದ ಮಾತನಾಡಿ….
ಇದು ಪಾಕಿಸ್ತಾನ ಅಲ್ಲ ಭಾರತ,
ಇದು ಜಿನ್ನಾ ಕಟ್ಟಿದ ದೇಶವಲ್ಲ,
ಮಹಾತ್ಮ ಗಾಂಧಿ ಹುಟ್ಟಿದ ದೇಶ,
ಇದು ಹಿಟ್ಲರ್ ಆಳಿದ ಸರ್ವಾಧಿಕಾರಿ ದೇಶವಲ್ಲ,
ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ದೇಶ,
ಇದು ಹಿಂಸೆಯ ಸಿರಿಯಾ ಅಲ್ಲ,
ಇದು ಮಹಾವೀರರ ಅಹಿಂಸೆಯ ಇಂಡಿಯಾ,
ಇದು ಭಯೋತ್ಪಾದಕ ಆಫ್ಘಾನಿಸ್ತಾನವಲ್ಲ,
ಇದು ಶಾಂತಿಯುತ ಹಿಂದೂಸ್ತಾನ,
ಇದು ಬಿನ್ ಲಾಡೆನ್ ಕಾರ್ಯಸ್ಥಾನವಲ್ಲ,
ಇದು ಬುದ್ದರ ವಾಸಸ್ಥಾನ,
ಇದು ಉಸಿರು ಕಟ್ಟಿಸುವ ಉತ್ತರ ಕೊರಿಯಾ ಅಲ್ಲ,
ಇದು ಉಸಿರು ನೀಡುವ
ಜನ್ಮ ಭೂಮಿ,
ಇದು ನಿಮ್ಮ ಧ್ವನಿಯನ್ನು ಧಮನಿಸುವ ಚೀನಾ ಅಲ್ಲ,
ಇದು ನಿಮ್ಮ ಧ್ವನಿಗೆ ಧ್ವನಿ ಸೇರಿಸುವ ಇಂಡಿಯಾ……………
ಹೆದರಬೇಡಿ, ಭಯಪಡಬೇಡಿ,
ಸಂಕೋಚ ಪಡಬೇಡಿ…..
ಮಾತನಾಡಿ, ನಿಮಗೆ ಕಂಡ ಸತ್ಯವನ್ನು ದೃಢವಾಗಿ ಹೇಳಿ..
ಜನಪ್ರಿಯತೆಯೇ ಸತ್ಯವಲ್ಲ….
ಚುನಾವಣೆಯಲ್ಲಿ ಕೊಲೆಗಡುಕರು ಗೆದ್ದಿದ್ದಾರೆ,
ಅತ್ಯಾಚಾರಿಗಳು ಗೆದ್ದಿದ್ದಾರೆ,
ಭ್ರಷ್ಟರು, ವಂಚಕರು, ದರೋಡೆಕೋರರು ಗೆದ್ದಿದ್ದಾರೆ. ಆದ್ದರಿಂದ ಸತ್ಯಕ್ಕೆ ಚುನಾವಣೆಯೇ ಮಾನದಂಡವಲ್ಲ. ಪ್ರಜಾಪ್ರಭುತ್ವ ಒಂದು ಉತ್ತಮ ಆಡಳಿತ ವ್ಯವಸ್ಥೆ. ಆದರೆ ಅದೇ ಸತ್ಯವಲ್ಲ.
ಸುಳ್ಳುಗಾರರು, ಮೋಸಗಾರರು, ಆತ್ಮವಂಚಕರು,
ದೇಶ ದ್ರೋಹಿಗಳು, ಮುಖವಾಡಗಳನ್ನು ಧರಿಸಿರುವವರು ಲಜ್ಜೆಗೆಟ್ಟು ಮಾತನಾಡುವಾಗ,
ತಿಳಿದಿರುವ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಸಂಕೋಚವೇಕೆ. ಕೆಟ್ಟವರ ಮಾತಿಗಿಂತ ಒಳ್ಳೆಯವರ ಮೌನ ಇನ್ನೂ ಅಪಾಯಕಾರಿ……..
ಮೀಸಲಾತಿಯೇ ಇರಲಿ, ರಾಮಮಂದಿರವೇ ಇರಲಿ,
ಮಹಿಳಾ ಸ್ವಾತಂತ್ರ್ಯವೇ ಇರಲಿ, ಜಾತ್ಯಾತೀತತೆಯೇ ಇರಲಿ,
ದೇಶ ಭಕ್ತಿಯೇ ಇರಲಿ,
ಧರ್ಮ ದೇವರುಗಳ ಚರ್ಚೆಗಳೇ ಇರಲಿ,
ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಿ.
ನೀವು ಹಿಂದುವಾಗಿರಿ, ಮುಸ್ಲಿಂ ಆಗಿರಲಿ, ಕ್ರಿಶ್ಚಿಯನ್ ಆಗಿರಲಿ, ಸಿಖ್ ಬೌದ್ಧ ಜೈನ್ ಪಾರ್ಸಿ ಯಾರೇ ಆಗಿರಲಿ, ಯಾವ ಜಾತಿ ಭಾಷೆ ಪ್ರದೇಶದವರೇ ಆಗಿರಲಿ, ಯಾವ ವೃತ್ತಿಯವರೇ ಆಗಿರಲಿ ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಹಕ್ಕು ಎಲ್ಲರಂತಯೇ ಸಮನಾಗಿ ಇದೆ.
ಆ, ಇದಕ್ಕೆ ಪ್ರತಿಕ್ರಿಯೆಯಾಗಿ ನಿಮಗೆ ನಿಂದನೆ, ನೋವು, ಹಿಂಸೆ, ಬೆದರಿಕೆ, ಹಲ್ಲೆ, ವ್ಯಂಗ್ಯ ಎಲ್ಲವೂ ಅನುಭವ ಆಗಬಹುದು. ಅದಕ್ಕೆ ಮಾನಸಿಕ ಸಿದ್ದತೆಯ ಅವಶ್ಯಕತೆ ಇದೆ. ನಿಮ್ಮ ಉದ್ದೇಶ ಒಳ್ಳೆಯದಾಗಿದ್ದರೆ ಇದು ನಿಮಗೆ ಸಮಸ್ಯೆಯೇ ಅಲ್ಲ.
ಆದರೆ ಒಂದು ಮಾತ್ರ ನೆನಪಿರಲಿ…..
ನೀವು ನಾಗರಿಕ ಸಮಾಜದಲ್ಲಿ ವಾಸಿಸುತ್ತಿರುವಿರಿ. ಇಲ್ಲಿ ಕಾನೂನು ಮತ್ತು ನೈತಿಕತೆ ಅಸ್ತಿತ್ವದಲ್ಲಿದೆ. ಸಂಯಮ, ಸಭ್ಯತೆ, ಪ್ರೀತಿ, ವಿಶ್ವಾಸ ಮೀರದಂತೆ ಸದಾ ಎಚ್ಚರಿಕೆ ವಹಿಸಬೇಕು. ಇನ್ನೊಬ್ಬರ ವೈಯಕ್ತಿಕ ನಿಂದನೆ, ಸುಳ್ಳು ಆರೋಪ, ಉದ್ದೇಶ ಪೂರ್ವಕವಾದ ಮಾನ ಹಾನಿ ಮಾಡಬಾರದು. ಅದು ಅಪರಾಧ ಸಹ.
ಮಾತಿನ ಮೇಲೆ ಹಿಡಿತವಿರಲಿ,
ಭಾಷೆಯ ಮೇಲೆ ನಿಯಂತ್ರಣವಿರಲಿ,
ಹೃದಯ ಒಳಗೆ ಕರುಣೆ ಇರಲಿ,
ಮನಸ್ಸಿನಲ್ಲಿ ಕ್ಷಮಾಗುಣವಿರಲಿ,
ಈ ನೆಲದ ಬಗ್ಗೆ ಅಭಿಮಾನವಿರಲಿ….
ಏಕೆಂದರೆ ಇದು ಭಾರತ,
ಸರ್ವಧರ್ಮ ಸಮನ್ವಯದ ನಾಡು,
ಭಗವದ್ಗೀತೆ, ಖುರಾನ್, ಬೈಬಲ್ ಗಳು ಪ್ರತಿನಿತ್ಯ ಪಠಿಸುವ ದೇಶ. ಸಂವಿಧಾನವೆಂಬ ಧರ್ಮವನ್ನು ಆನುರಿಸುವ ನಾಡು….
ಅಂಜದಿರಿ, ಅಳುಕದಿರಿ,
ಸತ್ಮಮೇವ ಜಯತೇ….
ಇದು ಭಾರತ….
ಇದೇ ಭಾರತ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ