ಸಿಸಿಬಿಯ ಮಾದಕದ್ರವ್ಯ ನಿಗ್ರಹ ವಿಭಾಗ ಹಾಗೂ ಕಸ್ಟಮ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅಂಚೆ ಮೂಲಕ ಸಾಗಿಸುತ್ತಿದ್ದ ಮಾದಕ ವಸ್ತುಗಳನ್ನು ಪತ್ತೆಹಚ್ಚಿದ್ದ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಮಾಹಿತಿ ನೀಡಿದರು.
ಬೆಂಗಳೂರು ನಗರ ಪೊಲೀಸ್ ಇಲಾಖೆಯ ಶ್ವಾನದಳದ ನೆರವಿನೊಂದಿಗೆ ಈ ತಂಡವನ್ನು ಪತ್ತೆಹಚ್ಚಲಾಗಿದೆ. ಕಾರ್ಯಾಚರಣೆಯಲ್ಲಿ 3500 ಪಾರ್ಸಲ್ ಗಳನ್ನು ಪತ್ತೆಹಚ್ಚಲಾಗಿದೆ. ಅದರಲ್ಲಿ 21,17,34,000 ರೂ. ಮೌಲ್ಯದ ನಿಷೇಧಿತ ಮಾದಕದ್ರವ್ಯಗಳು 606 ಪಾರ್ಸಲ್ ಗಳಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದರು.
ಪೋರ್ಟರ್ ಆಪ್ ಮೂಲಕ ಗ್ರಾಹಕರ ಹಾಗೂ ಚಾಲಕರ ನಕಲಿ ಗುರುತಿನ ಚೀಟಿ ಸೃಷ್ಟಿ ಮಾಡುತ್ತಿದ್ದ ಆರೋಪದ ಮೇಲೆ ದಕ್ಷಿಣ ವಲಯದ ಸಿಇಎನ್ ಪೊಲೀಸ್ ಠಾಣೆ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ. ಈ ನಕಲಿ ಗುರುತಿನ ಚೀಟಿ ಬಳಸಿಕೊಂಡು ನಕಲಿ ಆರ್ಡರ್ ಬುಕ್ ಮಾಡುತ್ತಿದ್ದರು. ಕಂಪನಿಗಳು ಈ ನಕಲಿ ಚಾಲಕರಿಗೆ ಹಣ ಪಾವತಿ ಮಾಡುತ್ತಿತ್ತು. ನಂತರ ಈ ಆರ್ಡರ್ ಗಳನ್ನು ರದ್ದುಗೊಳಿಸಿದ ನಂತರ ಕಂಪನಿಯು ನಕಲಿ ಗ್ರಾಹಕರಿಗೂ ಹಣ ಮರುಪಾವತಿ ಮಾಡುತ್ತಿತ್ತು. ಕಳೆದ 8 ತಿಂಗಳಲ್ಲಿ ಈ ರೀತಿಯಾಗಿ ಕಂಪನಿಗೆ 90 ಲಕ್ಷ ವಂಚನೆ ಮಾಡಲಾಗಿದೆ ಎಂದರು.
ನಗರದ ವಿವಿಧ ಶಾಲಾ ಕಾಲೇಜುಗಳಿಗೆ ಹುಸಿ ಬಾಂಬ್ ಕರೆ ಹಾಗೂ ಇಮೇಲ್ ಗಳನ್ನು ಕಳುಹಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ವಿವಿ ಪುರಂ ಪೊಲೀಸ್ ಠಾಣೆ ಅಧಿಕಾರಿಗಳು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕೃತ್ಯಕ್ಕೆ ಬಳಸಿದ್ದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಮಾದರಿಯ 10 ಪ್ರಕರಣಗಳು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ ಎಂದು ಹೇಳಿದರು.
ಹೂಡಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ವಲಯದ ಸಿಇಎನ್ ಪೊಲೀಸ್ ಠಾಣೆ ಅಧಿಕಾರಿಗಳು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಹಣ ದುಪ್ಪಟ್ಟು ಮಾಡುವ ಆಮೀಷ ಒಡ್ಡಿ ಯಾಮಾರಿಸುತ್ತಿದ್ದರು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರ ಆರೋಪಿಗಳ ಹುಡುಕಾಟ ನಡೆಸಲಾಗುತ್ತಿದ್ದು ಕಾರ್ಯಾಚರಣೆ ಮುಂದುವರಿದಿದೆ ಎಂದರು.