ಅಂಗನವಾಡಿ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಸಂಸದರ ಕಚೇರಿ ಮುಂದೆ ಬೃಹತ್ ಧರಣಿ

ಕೋಲಾರ: ಕೇಂದ್ರ ಸರಕಾರವು ಮುಂಬರುವ ಫೆಬ್ರವರಿ ಬಜೆಟ್ ನಲ್ಲಿ ಅಂಗನವಾಡಿ ನೌಕರರ ಐಸಿಡಿಎಸ್ ಯೋಜನೆಯ ಅನುದಾನ ಹೆಚ್ಚಳ, ಕನಿಷ್ಠ ವೇತನ ಜಾರಿ ಸೇರಿದಂತೆ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಟ್ಟು ಜನಪರ ನೀತಿಗಳಿಗಾಗಿ ಅಗ್ರಹಿಸಿ, ದುಡಿಯುವ ವರ್ಗದ ಹಕ್ಕನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಅಂಗನವಾಡಿ ನೌಕರರ ಸಂಘದ ವತಿಯಿಂದ ಮಂಗಳವಾರ ನಗರದ ಸಂಸದರ ಕಚೇರಿ ಮುಂದೆ ಧರಣಿ ನಡೆಸಿದರು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸಂಸದ ಎಸ್.ಮುನಿಸ್ವಾಮಿ ಅವರ ಕಚೇರಿಯವರಗೆ ಕಾಲ್ನಡಿಗೆಯಲ್ಲಿ ಆಗಮಿಸಿದ ಅಂಗನವಾಡಿ ನೌಕರರು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಜಿಲ್ಲಾ ಅಧ್ಯಕ್ಷೆ ಅಂಜಲಮ್ಮ ಮಾತನಾಡಿ, ಕಳೆದ 10 ವರ್ಷಗಳ ಹಿಂದೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರ ದೇಶದ ಕಾರ್ಮಿಕ ವರ್ಗವು ತೀವ್ರ ಸಂಕಷ್ಟದಲ್ಲಿದ್ದು, ಬದುಕು ಸಾಗಿಸಲು ಸಹ ಹರಸಾಹಸಪಡುವಂತಾಗಿದೆ. ದೇಶವನ್ನಾಳುವ ಸರಕಾರವು ನಿರಂತರವಾಗಿ ಕಾರ್ಪೊರೇಟ್ ಸಂಸ್ಥೆಗಳ ಪರವಾದ ನೀತಿಗಳನ್ನು ಜಾರಿಗೊಳಿಸುತ್ತಿದೆ. ದೇಶದ ಪ್ರಮುಖ ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸಲು ಹೊರಟಿದ್ದು, ಮತ್ತೆ ಕಾರ್ಮಿಕರನ್ನು ಗುಲಾಮರನ್ನಾಗಿ ದುಡಿಸುವ ಷಡ್ಯಂತ್ರ ಅಡಗಿದೆ. ಕನಿಷ್ಟ ಕೂಲಿ, ಸಾಮಾಜಿಕ ಭದ್ರತೆ ಇಲ್ಲದೆ ಅಸಂಘಟಿತ ಕ್ಷೇತ್ರದ ಕಾರ್ಮಿಕರು ಅತ್ಯಂತ ನಿಕೃಷ್ಟವಾಗಿ ಬದುಕುವಂತಾಗಿದೆ. ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ದುಡಿಯುವ ಸ್ಕೀಂ ನೌಕರರಾದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡುವಂತಾಗಿದೆ ಎಂದು ಸರಕಾರದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೊರೇಟ್ ಕಂಪನಿಗಳ ಕೈಗೊಪ್ಪಿಸಿ ದೇಶದ ಆರ್ಥಿಕತೆಯನ್ನೇ ದಿವಾಳಿಯೆಬ್ಬಿಸಿದೆ. ಇಂತಹ ಸಂದರ್ಭದಲ್ಲಿ ದೇಶದ ಜನತೆಯ ಬದುಕನ್ನು ಸಂರಕ್ಷಿಸಲು ಕಾರ್ಮಿಕ ವರ್ಗ ಒಂದಾಗಿ ಸಮರಧೀರ ಹೋರಾಟದತ್ತ ಮುನ್ನಡೆಯಲು ಸಂಸದರ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸ್ಪಂದಿಸದೇ ಹೋದರೆ ಮುಂದಿನ ಚುನಾವಣೆಯಲ್ಲಿ ರಾಜಕಾರಣವನ್ನು ಅಂಗನವಾಡಿ ನೌಕರರು ನಿರ್ಧರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಲ್ಪನಾ ಮಾತನಾಡಿ, ಶ್ರಮಿಕ ವರ್ಗವು ದೇಶದ ಶಕ್ತಿ ಎಂಬುದನ್ನು ತೋರಿಸಬೇಕಾಗಿದೆ ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತೆಯರಂಥಹ ಶ್ರಮಿಕ ವರ್ಗದ ಹಿತರಕ್ಷಣೆಯನ್ನು ಸರಕಾರವೇ ನಿರ್ಲಕ್ಷಿಸಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಅನುದಾನ, ವೇತನ ಹೆಚ್ಚಿಸುತ್ತಿಲ್ಲ. ಕೊರೊನಾ, ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸಿದ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮೃತರಾದರೆ ಪರಿಹಾರ ನೀಡುವುದಾಗಿ ಹೇಳಿದ್ದ ಸರಕಾರದ ಭರವಸೆ ಇಂದಿಗೂ ಈಡೇರಿಲ್ಲ. ಕೂಡಲೇ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ ಕೂಲಿ 31 ಸಾವಿರ ನೀಡಬೇಕು, ನಿವೃತ್ತಿ ವೇತನ, ಮಾಸಿಕ ಪಿಂಚಣಿ ನಿಗದಿಪಡಿಸಬೇಕು. ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಕಾರ್ಯದರ್ಶಿ ಗಾಂಧಿನಗರ ಮಂಜುಳ ಮಾತನಾಡಿ, ಸರಕಾರವು ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿ ಇರುವ ಯೋಜನೆಗಳಾದ ಐಸಿಡಿಎಸ್, ಎಂಡಿಎಂ, ಎನ್‌ಹೆಚ್‌ಎಂ, ಐಸಿಪಿಎಸ್, ಎಸ್ಎಸ್ಎ ನರೇಗಾ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿ ಸೇರಿದಂತೆ 1 ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕೊಟ್ಟು ನೌಕರರೆಂದು ಪರಿಗಣಿಸಬೇಕು, ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ನೀಡಲು ಕಾನೂನು ರಚಿಸಬೇಕು. ಎನ್.ಇ.ಪಿ ನಿಲ್ಲಿಸಬೇಕು, ಈ ಯೋಜನೆಗಳಲ್ಲಿ ದುಡಿಯುವ ಗುತ್ತಿಗೆ, ಒಳಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಿ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. ಇವರನ್ನು ಖಾಯಂ ಮಾಡಲು ವಿಶೇಷ ಕಾನೂನು ರಚಿಸಬೇಕು, 49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು, 21 ವರ್ಷಗಳಿಂದ ದುಡಿಯುವ ಬಿಸಿಯೂಟ ನೌಕರರಿಗೆ ಆಶಾ ಮತ್ತು ಇತರೆ ಸಿಬ್ಬಂದಿಗೆ 31 ಸಾವಿರ ಕನಿಷ್ಠ ವೇತನ ಜಾರಿ ಮಾಡಬೇಕು. ನಿವೃತ್ತಿ ಸೌಲಭ್ಯಗಳನ್ನು ಮಾಸಿಕ ಕನಿಷ್ಠ ಹತ್ತು ಸಾವಿರ ಪಿಂಚಣಿ ಕಲ್ಪಿಸಬೇಕು, ಬಿಸಿಯೂಟ ನೌಕರರಿಗೆ ಪರಿಹಾರ ನೀಡದೇ ನಿವೃತ್ತಿ ಮಾಡಬಾರದು, ಎಂದು ಒತ್ತಾಯಿಸಿದರು.

ಧರಣಿಯ ನೇತೃತ್ವವನ್ನು ಸಿಐಟಿಯು ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಎಂ.ವಿಜಯಕೃಷ್ಣ, ಭೀಮರಾಜ್, ಆಶಾ, ಎಚ್.ಬಿ ಕೃಷ್ಣಪ್ಪ, ಕೇಶವರಾವ್, ಜೆಎಂಎಸ್ ವಿ.ಗೀತಾ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಖಜಾಂಚಿ ಸುಜಾತ, ತಾಲೂಕು ಖಜಾಂಚಿ ಲಕ್ಷ್ಮೀದೇವಮ್ಮ, ವಿವಿಧ ತಾಲೂಕುಗಳ ಮುಖಂಡರಾದ ಮಮತಾ, ಪುಷ್ಪಲತಾ, ಹೇಮಾಲತ, ವಸಂತ, ಜಯಲಕ್ಷ್ಮಿ, ರತ್ನಮ್ಮ, ಅಮುದಾ, ನಾಗಮಣಿ, ಇಂದ್ರಾಣಿ, ಶಶಿಕಲಾ ಮುಂತಾದವರು ವಹಿಸಿದ್ದರು.

Leave a Reply

Your email address will not be published. Required fields are marked *