ಅಂಗನವಾಡಿ ನೌಕರರ ಅಹೋರಾತ್ರಿ ಧರಣಿ ಅಂತ್ಯ: ಬೇಡಿಕೆಗಳ ಈಡೇರಿಕೆಗೆ 15 ದಿನಗಳ ಕಾಲಾವಕಾಶ: ಸ್ಪಂದಿಸದಿದ್ದರೆ ಬೆಂಗಳೂರು ಚಲೋಗೆ ನಿರ್ಧಾರ

ಕೋಲಾರ: ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವು ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಧರಣಿಯನ್ನು ಮುಕ್ತಾಯಗೊಳಿಸಿದರು,

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅಂಜಲಮ್ಮ ಮಾತನಾಡಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ ೫೦ ವರ್ಷಗಳು ಸಮೀಪಿಸುತ್ತಿದೆ. ಪಾಲನೆ, ಪೋಷಣೆ, ಶಿಕ್ಷಣ ಸಂವಿಧಾನ ಬದ್ಧ ಕರ್ತವ್ಯಗಳಿವೆ. 2013ರ ಆಹಾರ ಭದ್ರತಾಕಾಯ್ದೆ, 2009ರ ಕಡ್ಡಾಯ ಶಿಕ್ಷಣ ಕಾಯ್ದೆಯ ಕರ್ತವ್ಯಗಳನ್ನು ಶಾಸನಬದ್ಧವಾಗಿ ಸ್ಥಾಪಿಸಲ್ಪಟ್ಟ ಅಂಗನವಾಡಿ ಕೇಂದ್ರಗಳ ಮುಖಾಂತರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಾರಿ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್ ಗಳು ಅವರನ್ನು 3 ಮತ್ತು 4 ಗ್ರೇಡ್‌ನ ನೌಕರರನ್ನಾಗಿ ಪರಿಗಣಿಸಲು ಜಂಟಿ ನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಬೇಕೆಂದು ನಿಯಮ ಇದ್ದರೂ ಜಾರಿ ಮಾಡಿಲ್ಲ ಎಂದು ಆರೋಪಿಸಿದರು

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಲ್ಪನಾ ಮಾತನಾಡಿ ಕೇಂದ್ರ ಸರ್ಕಾರವು ತನ್ನ ಮೂಲ ಜವಾಬ್ದಾರಿಯಿಂದ ನುಣಿಚಿಕೊಂಡು ಬಜೆಟ್ ಅನುದಾನಗಳನ್ನು ನಿರಂತರವಾಗಿ ಕಡತ ಮಾಡಿ ಅಂಗನವಾಡಿ ಮಕ್ಕಳಿಗೆ ಕೊಡುವ ಪೌಷ್ಠಿಕ ಆಹಾರದ ಘಟಕ ವೆಚ್ಚ ೨೦೧೮ರಿಂದ ಹೆಚ್ಚಳ ಮಾಡಿಲ್ಲ ಅದರಿಂದ ಗುಣಮಟ್ಟದ ಆಹಾರ ಪದಾರ್ಥಗಳನ್ನು ಕೊಡುವುದರಲ್ಲಿ ವೈಫಲ್ಯತೆ ಎದ್ದು ಕಾಣುತ್ತಿದೆ. ಅಂಗನವಾಡಿ ನೌಕರರ ವೇತನವನ್ನು ಕೂಡಾ ಹೆಚ್ಚಳ ಮಾಡದೇ ಹೊಸ ಆಕರ್ಷಕ ಘೋಷಣೆಗಳಿಗೆ ಮಾತ್ರವೇ ಸೀಮಿತವಾಗುತ್ತಿದೆ ಎಂದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಲಹೀನಗೊಳಿಸಲು ಶಿಕ್ಷಣ ಇಲಾಖೆ 4 ವರ್ಷದ ಮೇಲ್ಪಟ್ಟ ಮಕ್ಕಳನ್ನು ಸ್ಥಳಾಂತರಿಸಲು ಬೇರೆ ಬೇರೆ ಸ್ವರೂಪಗಳಲ್ಲಿ ಪ್ರಯತ್ನಿಸುತ್ತಿದೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ ತಡೆ ಹಾಕಿ ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾರ್ಥಮಿಕ ಶಿಕ್ಷಣ ಕೇಂದ್ರಗಳಾಗಿ ಪರಿವರ್ತಿಸಲು ತೀರ್ಮಾನಿಸಿದೆ ಆದರೆ ಇದಕ್ಕೆ ಬೇಕಾದಂತಹ ಹಣಕಾಸನ್ನು ಬಿಡುಗಡೆ ಮಾಡಿಲ್ಲ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಾಗ ತನ್ನ ಪ್ರಚಾರದಲ್ಲಿ ಹೇಳಿದಂತೆ ೩೫೦೦ ರೂ ಮತ್ತು ೧೭೫೦ ರೂ.ವೇತನ ಹೆಚ್ಚಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು

ಸಂಘಟನೆಯ ಮುಖಂಡರು ಮಾತನಾಡಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕೇಂದ್ರಗಳ ಬಾಡಿಗೆ ಹಣ ಪ್ರತಿ ತಿಂಗಳ ತೆಗೆಯಬೇಕು. ಗ್ಯಾಸ್ ಸಿಲಿಂಡರ್ ಹಣ ಖಾತೆಗೆ ಹಾಕುವ ಬದಲು ನೇರವಾಗಿ ಸಿಲಿಂಡರ್‌ಗಳು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಬೇಕು. ಮೊಟ್ಟೆ ಹಣ ಬೆಲೆ ಏರಿಕೆ ಅನುಸಾರವಾಗಿ ಬಿಲ್ ಜಮಾ ಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ಪ್ರತಿ ತಿಂಗಳ ಸರಿಯಾಗಿ ಹಾಲಿನ ಪೌಡರ್ ಬರುವಂತೆ ಮಾಡಬೇಕು. ಅಂಗನವಾಡಿ ಕಾರ್ಯಕರ್ತರಿಗೆ ಬಿ ಎಲ್ ಓ ಕೆಲಸದಿಂದ ಕೈಬಿಡಬೇಕು ಶಾಲಾ ಪೂರ್ವ ಶಿಕ್ಷಣ ನೆಡೆಸಲು ತೊಂದರೆ ಆಗುತ್ತದೆ.ಮಿನಿ ಅಂಗನವಾಡಿ ಕಾರ್ಯಕರ್ತರಿಗೆ ಇರುವ ಆದೇಶ ಕೊಡಬೇಕು. ಅಂಗನವಾಡಿ ನೌಕರರಿಗೆ ಗೌರವಧನ ಪ್ರತಿ ತಿಂಗಳಾಗಬೇಕು ಹಾಗೂ ಗೌರವಧನ ಪಡೆಯುವ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಅನುವು ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರ ಟಿಎ ಮತ್ತು ಡಿಎ ಬೆಲೆ ಏರಿಕೆ ಅನುಸಾರವಾಗಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಜೆಎಂಎಸ್ ಮುಖಂಡರಾದ ವಿ.ಗೀತಾ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು ನೇತೃತ್ವವನ್ನು ಸಂಘಟನೆಯ ಜಿಲ್ಲಾ ಖಜಾಂಚಿ ಸುಜಾತ, ತಾಲೂಕು ಕಾರ್ಯದರ್ಶಿ ಗಾಂಧಿನಗರ ಮಂಜುಳಾ, ಖಜಾಂಚಿ ಲಕ್ಷ್ಮೀದೇವಿ, ಮುಖಂಡರಾದ ಮಮತ, ಪುಷ್ಪಾವತಿ, ವಸಂತ, ಇಂದ್ರಾಣಿ, ಶಶಿಕಲಾ, ಅಮುದಾ, ರತ್ನಮ್ಮ ಸೇರಿದಂತೆ ನೌಕರರು ವಹಿಸಿದ್ದರು.

Leave a Reply

Your email address will not be published. Required fields are marked *