ಅಂಗನವಾಡಿ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಇ-ಖಾತೆ ಮಾಡಿರುವ ಆರೋಪ: ಗ್ರಾ.ಪಂ ಸದಸ್ಯನ ಆರೋಪಕ್ಕೆ ಇನ್ನುಳಿದ ಸದಸ್ಯರ ತಿರುಗೇಟು

ದೇವನಹಳ್ಳಿ: ಅಂಗನವಾಡಿ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಇ-ಖಾತೆ ಮಾಡಿಕೊಡಲಾಗಿದೆ‌ ಎಂಬ ಗ್ರಾಮ ಪಂಚಾಯಿತಿ ಸದಸ್ಯ ಕೆ.ಸೋಮಶೇಖರ್ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಕನ್ನಮಂಗಲ ಗ್ರಾಮ ಪಂಚಾಯತಿಯ 25 ಸದಸ್ಯರು ಮಂಗಳವಾರ ದಾಖಲೆಗಳ ಸಮೇತ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್ ಅನುರಾಧ ಅವರಿಗೆ ಸ್ಪಷ್ಟೀಕರಣ ಪತ್ರ ನೀಡಿದ್ದಾರೆ.

ಗ್ರಾಮ ಪಂಚಾಯತಿ ಸದಸ್ಯ ಕೆ.ಸೋಮಶೇಖರ್ ಅವರು ದುರುದ್ದೇಶದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿಗೆ ಕೆಟ್ಟ ಹೆಸರು ತರುವ ಅವರ ಹುನ್ನಾರವನ್ನು ಸಹಿಸುವುದಿಲ್ಲ ಎಂದು ಸಿಇಒ ಅವರಿಗೆ ಸಲ್ಲಿಸಿರುವ ಸ್ಪಷ್ಟೀಕರಣ ಪತ್ರದಲ್ಲಿ ಉಳಿದೆಲ್ಲಾ ಗ್ರಾ.ಪಂ. ಸದಸ್ಯರು ತಿಳಿಸಿದ್ದಾರೆ.

ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಲಕ್ಷ್ಮೀಕಾಂತ್ ಮಾತನಾಡಿ, ಸೋಮಶೇಖರ್ ಹೊರಿಸಿರುವ ಆರೋಪಗಳು ನಿರಾಧಾರವಾಗಿವೆ. ಈ ಬಗ್ಗೆ ಜಿ.ಪಂ. ಸಿಇಒ ಅವರಿಗೆ ದಾಖಲೆಗಳನ್ನು ಒದಗಿಸಿ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು.

ಪೂಜನಹಳ್ಳಿಯ ದೊಡ್ಡಮುನಿಯಪ್ಪ ಅವರ ಜಾಗಕ್ಕೆ ಮಂಡಲ ಪಂಚಾಯತಿ ಅವಧಿಯಿಂದಲೂ ಕಂದಾಯ ಕಟ್ಟಲಾಗಿದೆ. ಇದು ಪಂಚತಂತ್ರ ತಂತ್ರಾಂಶ ಹಾಗೂ ಡಿಮ್ಯಾಂಡ್ ರಿಜಿಸ್ಟರ್ ನಲ್ಲೂ ದಾಖಲಾಗಿದೆ.  ನ್ಯಾಯಾಲಯದ ಆದೇಶ, ಲೋಕಾಯುಕ್ತ ಸ್ಥಳ‌  ಮಹಜರಿನಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಅಂಗನವಾಡಿ ಜಾಗವನ್ನು ಗ್ರಾಮ ಪಂಚಾಯ್ತಿ ಸುಪರ್ದಿಗೆ ಪಡೆದು ಅದನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದೇವೆ. ಹೀಗಿರುವಾಗ ಸೋಮಶೇಖರ್ ಅವರ ಆರೋಪಗಳು ಸತ್ಯಕ್ಕೆ ದೂರುವಾದುದು ಎಂದರು.

ಅಂಗನವಾಡಿ ಸ್ಥಳವನ್ನು ಉಳಿಸುವಂತೆ ಕನ್ನಮಂಗಲ ಗ್ರಾಮ ಪಂಚಾಯತಿ ಸದಸ್ಯ ಸೋಮಶೇಖರ್ ಕೆ ಅವರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಆಹೋರಾತ್ರಿ ಧರಣಿ ಕುಳಿತಿರುವ ಹಿನ್ನೆಲೆಯಲ್ಲಿ ಗ್ರಾ.ಪಂ.ಸದಸ್ಯರು ಇಂದು ಸಿಇಒ ಅವರಿಗೆ ಸ್ಪಷ್ಟೀಕರಣ ಪತ್ರ ನೀಡಿದರು.

Leave a Reply

Your email address will not be published. Required fields are marked *

error: Content is protected !!