ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಮೀನಾಮೇಷ: ಕಲಿಕೆಗೆ ಪೂರಕವಲ್ಲದ ಹಂದಿಗೂಡಿನಂತಿರುವ ಬಾಡಿಗೆ ಮನೆಯಲ್ಲಿ ಅಂಗನವಾಡಿ ಮಕ್ಕಳಿಗೆ ಪಾಠ, ವಿಶ್ರಾಂತಿ

ಮನೆಯಲ್ಲಿ ಆಟವಾಡಿಕೊಂಡು ಕಾಲಕಳೆಯುತ್ತಿದ್ದ ಮಕ್ಕಳನ್ನು ಪೋಷಕರು ಅಂಗನವಾಡಿ ಕೇಂದ್ರಕ್ಕೆ ತಂದು ಬಿಡುತ್ತಾರೆ. ಆದರೆ, ಇಲ್ಲಿ ಮಕ್ಕಳಿಗೆ ಯಾವುದೇ ತರಹದ ಅನುಕೂಲಗಳು ಇಲ್ಲದೆ, ಪುಟ್ಟ ಕಂದಮ್ಮಗಳು ಅಂಗನವಾಡಿ ಕೇಂದ್ರದಲ್ಲಿ ಒಬ್ಬರಮೇಲೊಬ್ಬರು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದು ಎಲ್ಲಿ ಎಂತೀರಾ… ಈ ಸ್ಟೋರಿ‌‌‌ ಓದಿ…..

ದೊಡ್ಡಬಳ್ಳಾಪುರ ತಾಲೂಕಿನ‌ ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಗೊಂಡನಹಳ್ಳಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಬರುವ ಮಕ್ಕಳು ರೋಗದ ಭೀತಿ ಎದುರಿಸುವಂತಾಗಿದೆ. ಅಂಗನವಾಡಿಯಲ್ಲಿ ಸೂಕ್ತ ಮೂಲ ಸೌಕರ್ಯಗಳು ಇಲ್ಲದೇ ಅವ್ಯವಸ್ಥೆ ಆಗರವಾಗಿದೆ. ಕೇಂದ್ರಕ್ಕೆ ಬರುವ ಮಕ್ಕಳಿಗೆ ಇದೊಂದು ಜೈಲಿನ ಕೋಣೆಯಂತೆ ಭಾಸವಾಗುತ್ತಿದೆ. ಏಕೆಂದರೆ ಆ ಕೇಂದ್ರವು ಮಕ್ಕಳಿಗೆ ಉಸಿರುಗಟ್ಟಿಸುವ ವಾತಾವರಣದ, ಹಂದಿಗೂಡಿನಂತಿರುವ ಬಾಡಿಗೆ ಮನೆಯೊಂದರಲ್ಲಿ ಬಾಡಿಗೆ ಸಲ್ಲಿಸುತ್ತಾ ಮಕ್ಕಳಿಗೆ ಪಾಠ ಪ್ರವಚನ ಮಾಡಲಾಗುತ್ತಿದೆ.

ಹಂದಿಗೂಡಿನಂತಿರುವ ಬಾಡಿಗೆ ಮನೆಯೊಂದರಲ್ಲಿ ಸುಮಾರು 30ಮಕ್ಕಳು ಒಬ್ಬರಮೇಲೊಬ್ಬರು‌ ಕುಳಿತುಕೊಂಡು ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದೆ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಮಾಡಲು ತೀರ್ಮಾಸಿ ಶಾಲಾ ಆವರಣದಲ್ಲಿ ಪಾಯ ಹಾಕಿ ಕಟ್ಟಡ ನಿರ್ಮಾಣ ಮಾಡಿ ಅನುದಾನ ಕೊರತೆ ಇದೆ ಎಂದು ಹೇಳಿ ಕಾಮಗಾರಿಯನ್ನು ಪೂರ್ಣಗೊಳಿಸದೇ ಅರೆಬರೆ ಕೆಲಸ ಮಾಡಿ ಹಾಗೇ ಬಿಡಲಾಗಿದೆ.

ಗ್ರಾಮದಲ್ಲಿ ಡಬಲ್‌ ಡಿಗ್ರಿ ವ್ಯಾಸಾಂಗ ಮಾಡಿರುವ ಪೋಷಕರು ಕೈ ತುಂಬಾ ಸಂಬಳ‌ ಪಡೆದರೂ ತಾನು ಓದಿದ ಅಂಗನವಾಡಿ ಕೇಂದ್ರ ‌ಉಳಿಯಬೇಕು ಎಂದು ಸರ್ಕಾರಿ ಅಂಗನವಾಡಿ ಕೇಂದ್ರಕ್ಕೆ‌ ಕಳಿಸುತ್ತಿದ್ದಾರೆ. ಆದರೆ, ಮಕ್ಕಳಿಗೆ ಬೇಕಾದ ಬೋರ್ಡ್ ವ್ಯವಸ್ಥೆ ಇಲ್ಲ, ಊಟಕ್ಕೆ ಸರಿಯಾಗಿ ಕುಳಿತುಕೊಳ್ಳಲು ಜಾಗವಿಲ್ಲ, ಒಬ್ಬರ ಮೇಲೊಬ್ಬರು ಕುಳಿತುಕೊಂಡು ಪಾಠ ಕೇಳಬೇಕಾದ ಪರಿಸ್ಥಿತಿ, ತಿಂಗಳಿಗೆ ಒಮ್ಮೆ‌ ಗರ್ಭಿಣಿಯರಿಗೆ ಆಹಾರ ಸಾಮಾಗ್ರಿಗಳನ್ನು ನೀಡುವಾಗ ಮಕ್ಕಳಿಗೆ ಜಾಗವೇ ಇರುವುದಿಲ್ಲ. ಹಾಗಾಗಿ ಮಕ್ಕಳಿಗೆ ಪಾಠ ಕೇಳಲು ಪೂರಕವಾದ ವಾತಾವರಣ ಇಲ್ಲ. ಇದೇ ವಾತಾವರಣ ಇದ್ದರೆ ನಮ್ಮ‌ ಮಕ್ಕಳು ಕಲಿಕೆಯ ಮೇಲೆ‌ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಪೋಷಕರು, ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿದ್ದಾರೆ.

ಇನ್ನೂ ಬಾಡಿಗೆ ಕಟ್ಟಡಕ್ಕೆ ಪ್ರತಿ ತಿಂಗಳ ಎರಡು ಸಾವಿರ ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಖರ್ಚು ಮಾಡಲಾಗುತ್ತಿದೆ. ಅದೇ ಹಣವನ್ನು ಯಾವುದಾದರೂ ಬೇರೆ ಕಟ್ಟಡಕ್ಕೆ ಶಿಫ್ಟ್ ಮಾಡಿ ಖರ್ಚು ಮಾಡಲಿ ಎಂದು ಪೋಷಕರ ಅಭಿಪ್ರಾಯ.

ಇದ್ದ ಒಂದು ಅಂಗನವಾಡಿ ಮಳೆಗೆ ನೆಲಸಮ ಆಗಿತ್ತು. ಹಾಗಾಗಿ ಕಳೆದ ನಾಲ್ಕೈದು ವರ್ಷಗಳಿಂದೆ ನಿರ್ಮಿತ ಕೇಂದ್ರ ಮತ್ತು ಪಂಚಾಯಿತಿ ನರೇಗಾ ಹಣದಿಂದ ಕಾಮಗಾರಿ ಪ್ರಾರಂಭ ಮಾಡಿದ್ದರು. ಕಾಮಗಾರಿ ಪ್ರಾರಂಭದಲ್ಲಿಯೇ ಕಳಪೆ ಕಾಮಗಾರಿಯ ಅಪಸ್ವರ ಕೇಳಿಬಂದಿತ್ತು. ಅಡಿಪಾಯಕ್ಕೆ ಕಲ್ಲುಗಳನ್ನು ಹಾಕದೆ ಬರೀ ಜಲ್ಲಿಕಲ್ಲುಗಳನ್ನು ಹಾಕಿ ಪಾಯ ಹಾಕಲಾಗಿದೆ. ಜೊತೆಗೆ ಹಳೇ ಸಂಪಿಗೆ ತೇಪೆ ಹಾಕಿ ಹೊಸ ಸಂಪಿನ ಬಿಲ್ ಸಹ ಮಾಡಿಕೊಂಡಿದ್ದಾರೆ‌. ಇದರ ನಡುವೆಯೇ ಅಂಗನವಾಡಿ ಕಟ್ಟಡ ಮೋಲ್ಡ್ ಮುಗಿದಿದ್ದು, ಪ್ಲಾಸ್ಟಿಕ್ ಮಾಡಿಲ್ಲ. ಹಾಗಾಗಿ ಸದ್ಯಕ್ಕೆ ಊರಿನಲ್ಲಿರುವ ಮನೆಯನ್ನು ಬಾಡಿಗೆ ಪಡೆದುಕೊಂಡು ಅಂಗನವಾಡಿ ಕೇಂದ್ರವನ್ನು ನಡೆಸಲಾಗುತ್ತಿದೆ. ಆ ಬಾಡಿಗೆ ಮನೆಯಲ್ಲಿ ಮಕ್ಕಳು ಪಡಬಾರದ ನೋವು, ತೊಂದರೆ, ಸಮಸ್ಯೆ ಅನುಭವಿಸುತ್ತಿದ್ದಾರೆ. ಶೀಘ್ರವಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳಿಗೆ ಕಲಿಕೆಗೆ, ವಿಶ್ರಾಂತಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

ಗ್ರಾಮದಲ್ಲಿ ಅಂಗನವಾಡಿ ಕಟ್ಟಡವನ್ನು ಅರೆಬರೆ ನಿರ್ಮಾಣ ಮಾಡಿ ಹಾಗೇ ಬಿಟ್ಡಿದ್ದಾರೆ.‌ ನಮಗೆ ಕೇವಲ ಹತ್ತು ಲಕ್ಷ ಅನುದಾನ ಅಷ್ಟೇ ಬಿಡುಗಡೆ ಆಗಿರುವುದು ಅಷ್ಟರಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದೇವೆ ಎಂದು ನಿರ್ಮಿತಿ ಕೇಂದ್ರದವರು ಹೇಳುತ್ತಿದ್ದಾರೆ. ಇನ್ನುಳಿದ ಕಾಮಗಾರಿಯನ್ನು ನರೇಗಾ ಅನುದಾನದಲ್ಲಿ ಮಾಡಬೇಕಂತೆ. ಆದರೆ, ಇದೂವರೆ ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು, ಅಧಿಕಾರಿಗಳು ಸ್ಥಳಕ್ಕೆ ಬಂದು ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಕಾಮಗಾರಿಯನ್ನು ಪ್ರಾರಂಭಿಸಿಲ್ಲ ಎಂದು ಊರಿನ ಗ್ರಾಮಸ್ಥ ಪುಟ್ಟಪ್ಪ ಕಿಡಿಕಾರಿದರು.

ದನದ ಕೊಟ್ಟಿಗೆಯಂತಿರುವ ಮನೆಯನ್ನು ಬಾಡಿಗೆಗೆ ಪಡೆದು ಮಕ್ಕಳಿಗೆ ವಿದ್ಯಾಭಾಸ್ಯ ಮಾಡಲಾಗುತ್ತಿದೆ. ಮಕ್ಕಳು ಇಲ್ಲಿ ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು, ಊಟ ಮಾಡಲು ಸೂಕ್ತ ಜಾಗವಿಲ್ಲ. ಒಬ್ಬರಮೇಲೊಬ್ಬರು ಕುಳಿತುಕೊಂಡು ಪಾಠ ಕೇಳುವ ಪರಿಸ್ಥಿತಿ ಇದೆ‌. ಮಕ್ಕಳಿಗೆ ಏನಾದರು ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಯಾರು ಹೊಣೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಿಡಿಪಿಒ ಡಾ.ರವಿಕುಮಾರ್, ಸದ್ಯ ತಿರುಮಗೊಂಡನಹಳ್ಳಿಯಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ನಿರ್ಮಿತಿ‌ ಕೇಂದ್ರದಿಂದ ಕಟ್ಟಡ ನಿರ್ಮಾಣವಾಗಿ ಮೋಲ್ಡ್ ಹಾಕಲಾಗಿದೆ. ಈಗ ನರೇಗಾ ಅಡಿಯಲ್ಲಿ ಕೆಲಸ ಪ್ರಾರಂಭವಾಗಬೇಕು. ಆದಷ್ಟು ಬೇಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಳಿ ಚರ್ಚಿಸಿ ಕಾಮಗಾರಿ ನಡೆಸುವಂತೆ ಕ್ರಮ ಕೈಗೊಳ್ಳಲಾಗುವುದು. ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವವರೆಗೂ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಸರ್ಕಾರ ಹಾಗೂ ಇಲಾಖೆಯಿಂದ ಎಲ್ಲಾ ಸೌಲಭ್ಯಗಳನ್ನು ಅಲ್ಲಿನ ಮಕ್ಕಳಿಗೆ ಒದಗಿಸಲಾಗುತ್ತಿದೆ ಎಂದರು.

ಈಗಾಗಲೇ ನಿರ್ಮಿತಿ ಕೇಂದ್ರದಿಂದ ನಡೆದಿರುವ ಕಟ್ಟಡ ನಿರ್ಮಾಣ, ಮೋಲ್ಡ್ ಕಾಮಗಾರಿಯಲ್ಲಿ ಲೋಪದೋಷವಿದ್ದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಒಟ್ಟಾರೆ ಸರಕಾರ ಮಕ್ಕಳನ್ನು ಸರಕಾರಿ ಶಾಲೆಗಳತ್ತ ಮುಖ ಮಾಡಲು ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದ್ದರೆ, ಕೆಲವು ಅಧಿಕಾರಿಗಳು ನಿರ್ಲಕ್ಷ್ಯದಿಂದ ಬಂದ ಮಕ್ಕಳು ಕೂಡ ಈಗ ಖಾಸಗಿ ಶಾಲೆಗಳತ್ತ ಮುಖಮಾಡುವಂತಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಪ್ರಕೃತಿಯ ವಾತವರಣ ಸೃಷ್ಟಿಸಿ ಮಕ್ಕಳಿಗೆ ವಿದ್ಯಾದಾನ ಮಾಡಲು ಅಂಗನವಾಡಿ ಕೇಂದ್ರಗಳನ್ನು ನಿರ್ಮಾಣ ಮಾಡಬೇಕಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಮಕ್ಕಳಿಗೆ ಸುಸರ್ಜಿತವಾದ ಕಟ್ಟಡವನ್ನು ನಿರ್ಮಾಣ ಮಾಡಿ ಮಕ್ಕಳ ಕಲಿಕೆಗೆ, ವಿಶ್ರಾಂತಿಗೆ ಅನುವು ಮಾಡಿಕೊಡ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!