ಅಂಗನವಾಡಿ ಕಾರ್ಯಕರ್ತೆರ ಬೇಡಿಕೆಗಳ ಈಡೇರಿಕೆಗಾಗಿ ಜ.23 ರಂದು ಸಂಸದರ ಕಚೇರಿ ಮುಂದೆ ಧರಣಿ

ಕೋಲಾರ: ಅಂಗನವಾಡಿ ಕಾರ್ಯಕರ್ತರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜ.23 ರಂದು ಮಂಗಳವಾರ ಕೋಲಾರ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಅವರ ನಗರದಲ್ಲಿರುವ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಿದ್ದು ಇದರ ಭಾಗವಾಗಿ ಅಂಗನವಾಡಿ ಕಾರ್ಯಕರ್ತರು ತಾಲೂಕಿನಲ್ಲಿ ಗ್ರಾಪಂ ಹಾಗೂ ಹೋಬಳಿ ಕೇಂದ್ರಗಳಲ್ಲಿ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ತಾಲೂಕು ಅಧ್ಯಕ್ಷೆ ಕಲ್ಪನಾ ಮಾತನಾಡಿ, ದೇಶಾದ್ಯಂತ ಎಲ್ಲಾ ಸಂಸದರ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಲಿದೆ. ಕರ್ನಾಟಕದಲ್ಲೂ ಎಲ್ಲಾ 28 ಸಂಸದರ ಕಚೇರಿ ಎದುರು ಧರಣಿ ನಡೆಸಲಿದ್ದೇವೆ. ಜ.23ರಂದು ಬೆಳಗ್ಗೆ 10ಗಂಟೆಯಿಂದ 24ರ ಮುಂಜಾನೆ 5 ಗಂಟೆಯವರೆಗೆ ನಿರಂತರ ಧರಣಿ ನಡೆಯಲಿದೆ. ಒಂದು ದಿನ ಎಲ್ಲಾ ಅಂಗನವಾಡಿಗಳನ್ನು ಮುಚ್ಚಿ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು

ಅಂಗನವಾಡಿ ನೌಕರರು ಕಳೆದ 49 ವರ್ಷಗಳಿಂದ ಸರಕಾರಿ ನೌಕರರಾಗಿ ದುಡಿಯುತಿದ್ದರೂ ಕನಿಷ್ಠ ವೇತನ, ಪಿಎಫ್, ಇಎಸ್‌ಐ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲದೇ ಈಗಲೂ ದುಡಿಯುತಿದ್ದಾರೆ. ನಿವೃತ್ತಿ ನಂತರದ ಪಿಂಚಣಿಯೂ ಅವರಿಗೆ ಸಹ ಸಿಗುತ್ತಿಲ್ಲ. ದೇಶದಲ್ಲಿ 14 ಲಕ್ಷ ಅಂಗನವಾಡಿಗಳಿದ್ದು, ಇವುಗಳಲ್ಲಿ 28 ಲಕ್ಷ ಕಾರ್ಯಕರ್ತರು ಹಾಗೂ ಸಹಾಯಕಿಯರು ದುಡಿಯುತಿದ್ದಾರೆ. 11 ಕೋಟಿಯಷ್ಟು ಮಕ್ಕಳು ಅಂಗನವಾಡಿಯಲ್ಲಿದ್ದಾರೆ. ಇದರೊಂದಿಗೆ ಎಂಟು ಕೋಟಿ ಗರ್ಭಿಣಿಯರು ಹಾಗೂ ಬಾಣಂತಿಯರು ಸಹ ಅಂಗನವಾಡಿಯಿಂದ ವಿವಿಧ ಸೌಲಭ್ಯ ಪಡೆಯುತಿದ್ದಾರೆ. ಇಷ್ಟೆಲ್ಲಾ ಇದ್ದರೂ ಕೇಂದ್ರ ಮತ್ತು ರಾಜ್ಯ ಸರಕಾರ ಇವರಿಗೆ ಸೌಲಭ್ಯಗಳನ್ನು ನೀಡಲು ಹಿಂದೇಟು ಹಾಕುತ್ತಾ ಇದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಗಾಂಧಿನಗರ ಮಂಜುಳ ಮಾತನಾಡಿ, ನಮಗೆ ಸರಕಾರದ ವೇತನದ ಜೊತೆಗೆ ಗೌರವಧನವನ್ನು ನೀಡುತ್ತಿದೆ. ಎಲ್ಲಾ ಕೆಲಸಗಳನ್ನು ನಮ್ಮಿಂದ ಮಾಡಿ ಸಿಕೊಳ್ಳುವ ಸರಕಾರ, ಸರಕಾರಿ ನೌಕರರಾಗಿ ನಮ್ಮನ್ನು ಪರಿಗಣಿಸುತ್ತಿಲ್ಲ. ಇಲಾಖೇತರ ಕೆಲಸಗಳಾದ ಬಿಎಲ್‌ಓ ಸರ್ವೇ, ಐಸಿಡಿಎಸ್ ಯೋಜನೇತರ ಕೆಲಸಗಳಿಗೆಲ್ಲಾ ಅಂಗನವಾಡಿ ನೌಕರರನ್ನು ಬಳಸಿಕೊಳ್ಳಲಾಗುತ್ತಿದೆ. 49 ವರ್ಷಗಳಿಂದ ದುಡಿಯುತ್ತಿದ್ದೇವೆ ನೌಕರರಿಗೆ 31 ಸಾವಿರ ರೂ.ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳು ಹಾಗೂ ಕನಿಷ್ಠ 10 ಸಾವಿರ ರೂ.ಪಿಂಚಣೆ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಖಜಾಂಚಿ ಲಕ್ಷ್ಮೀದೇವಮ್ಮ ಸೇರಿದಂತೆ ಕಾರ್ಯಕರ್ತರು, ಭಾಗವಹಿಸಿದ್ದರು.

Leave a Reply

Your email address will not be published. Required fields are marked *